ಸೀತೆಯರ ದಂಡು
ದಾಪುಗಾಲು ಹಾಕುತ್ತ
ಹೊರಟಿತ್ತು ನೊಗ ಹೊತ್ತು
ಹೈಟೆಕ್ ಚುನಾವಣೆಗಳ
ಭದ್ರಕೋಟೆಯ ಭೇದಿಸಿ,
ಪಂಚ ಮಹಿಳೆಯರು
ಮುಖ್ಯ ಮಂತ್ರಿಗಳು
ಸ್ತ್ರೀಲೋಕದ ಕಷ್ಟಗಳು
ಬಗೆ ಹರಿದಾವೆ?
ಸೀತೆಯರಿಗಾದ ಅನ್ಯಾಯ
ಸದನದಲಿ ಸದ್ದಾಗಿ
ಧ್ವನಿಯೆತ್ತಿ ಕೇಳಿಯಾರೆ?
ಅಡುಗೆ ಕೋಣೆಯಿಂದಲೇ
ಕೈ ಒರೆಸಿಕೊಳ್ಳುತ್ತಾ ಬಂದು
ಬೆವರನ್ನೂ ಒರೆಸದೇ
ಪತಿಯ ಆಣತಿಯಂತೆ
ಖುರ್ಚಿಯಲಿ ಪವಡಿಸಿ
ಶತಮಾನಗಳ ದಣಿವಾರಿಸಿಕೊಂಡ
ಲಾಲೂನ ಪತ್ನಿ ರಾಬ್ಡಿದೇವಿ.
ಜಯಾ, ಮಾಯಾ, ಉಮಾ
ಕುಂವಾರಿ ಮುಖ್ಯಮಂತ್ರಿಗಳು
ಖೋಟಾ ಸನ್ಯಾಸಿನಿಯ
ಕಪಟ ನಾಟಕದ ಆಟಗಳು
ವಿಧವೆಯ ಪಟ್ಟ ಹೊತ್ತ
ವಸುಂಧರೆಯ ಚೆಲುವು
ಪುರುಷ ರೂಪಿಸಿದ
ತಂತ್ರಗಾರಿಕೆಯ ಗೆಲುವು.
*****



















