Home / ಕವನ / ಕವಿತೆ / ಮನಸೂರಿ

ಮನಸೂರಿ

ಡೆಹರಾಡೂನಿನ ತಪ್ಪಲ ಸೀಮೆಯ
ನೇರುತ ಮುಂದಕೆ ತಳೆಯುತಿರೆ
ದರಿಕಂದರಗಳ ಬನಸಿರಿ ಸುರಿಮಳೆ
ಬೆಳೆಸಿನ ಹೊಲಗಳ ಕಾಣುತಿರೆ
ಕನಸಿಗೆ ಕಾಣಿಸಿ ಕವನವ ಕಲಿಸುವ
ಮನಸಿನ ಮೈಸಿರಿ ಮುಂಚುತಿರೆ
ತನುವನು ಚಣಚಣ ತೊರೆಯುತ ಮನವೇ
ಹಿಮಗಿರಿ ಸೀಮೆ ಮುಸುಕುತಿದೆ
ಕಾಣುವೆನೊಂದೆಡೆ ಕೆಂಪಿನ ಗಿರಿಗಳ
ತರುಗಳ ವಿರಹಿತ ಮುಂದಲೆಯ
ಕಾಣುವೆ ಕಂದರದಿಂಬಿನ ಗಿರಿಗಳ
ತರುಗಳ ಪೂರಿತ ವನಸಿರಿಯ
ಪಾವನ ಗಂಗೆಯ ಜನ್ಮಸ್ಥಳದಿಂ
ಕೇದಾರೇಶ್ವರ ಸೀಮೆಯಲಿ
ಬೆಳ್ಳಿಯ ಬೆಟ್ಟದ ಬೆಳ್ಗೊಡೆ ಕಾಣುತ
ಕನಕರಿಸುತ ನಾ ಮೈ ಮರೆದೆ
ಕಣ್ಣಾಲಿಗಳಂ ಸೋರುವ ಸೀರ್ಪನಿ
ಸೀಮೆಯ ಮೀರಿತು ತಾಪದಲಿ
ಕಣ್ಮನಮೆಲ್ಲವು ನುಣ್ಮರೆಯಾದವು
ಹೃದಯದ ದೇವನ ಸೀಮೆಯಲಿ
ಏಣಿನ ಮೇಲೆಯು ಓರೆಗಳಲ್ಲಿಯು
ಪವಡಿಸಿ ಆಡುವ ಮನೆಗಳವು
ಆಟವಿಕನು ತಾ ಮಾಟದೆ ಗೆಯ್ದಿಹ
ಕೋಟೆಯ ಕೊತ್ತಳ ಕೂಟಗಳೊ !!
ಅರಸರ ಸಿರಿಗರ ಸಿರಿಸೆರೆಮನೆಗಳು
ದರಿಕಂದರದಲಿ ತೇಲುತಿವೆ
ಪುರುಷ ವಿವರ್ಜಿತ ಸದನಗಳೆಲ್ಲವು
ಕುಳಿರಿನ ಕಾಲವ ಕೂಗುತಿವೆ
ಕೆಳಗಿನ ಸೀಮೆಯ ಸೇರಲು ಧನಿಕರ
ತಂಡವು ಮಿಂಡೆದ್ದೋಡುತಿದೆ
ಸಾರುತ ಬರುತಿಹ ಕುಳಿರಿನ ಕಾಟದೆ
ಜಾರುತಲೊಯ್ಯನೆಯೋಡುತಿದೆ
ಪಾತಾಳದ ಬಿಳಿ ಮಿಶನರಿ ಜನಗಳು
ಭೂತಳ ಶಿಖರದೆ ಚರ್ಚುಗಳ
ಯಾತಕೆ ಕಟ್ಟಿಹರೆಂಬುದ ಕಾಣುವೆ
ಋಷಿಮುನಿ ಜನಗಳ ನಾಡಿನಲಿ
೧೦
ಭಾರತ ವರ್ಷದ ಋಷಿಮುನಿ ಜನಗಳ
ವೈದಿಕ ಧರ್ಮವ ತವೆ ತವಿಸೆ
ಪಾತಾಳದ ವಿಷಭೋಗಿಗಳೆಲ್ಲವು
ನಂಜಿಟ್ಟಾಡುವ ನೆಲವನೆಯೊ
೧೧
ಬೀದಿಯೊಳಲೆಯುತ ಮೋದವ ಬೀರುವ
ಪಾಶ್ಚಾತ್ಯರುಗಳ ಪಸುಳೆಯರ
ನಲಿನಲಿದಾಡುವ ನಗೆಮಗನೋಡಲು
ಪ್ರಾಣವು ವೀಣೆಯೊಳಾಡುತಿದೆ
೧೨
ಆಂಗ್ಲರ ನಾಡಿನ ವಿದುಷಿಯರೆನಿಬರೊ
ಬಾಲಕ ವಲಯವನಾವರಿಸಿ
ಮೇಳದೆ ತಾಳದೆ ತಲೆಯತ್ತಲೆಯುವ
ಸೊಬಗಿನ ಸೊಂಪದು ಸೂಸುತಿದೆ
೧೩
ಆಂಗ್ಲ ವಿದುಷಿಯನು ಶಾಲೆಯ ಕೇಳಲು
ಸಿಟ್ಟಿಗೆ ಒಂದಳು ಸಿಡಿದೆದ್ದು
ದೊರೆತನ ಗರುವಿಕೆ ಗುರುತನದಲ್ಲಿಯು
ನೆರೆ ಸೆರೆಗೊಂಬುದು ಧರೆಯಲ್ಲಿ
೧೪
ಆರ್ಯಾವರ್ತದ ಮಹಿಳೆಯರೆನಿಬರೊ
ವೈದಿಕಕಾಲದ ಕುರುಹಿಟ್ಟೊ
ಸರಳತನದ ಸಾಮ್ರಾಜ್ಯವ ಸೂಸುತ
ಬರೆಹವ ಬರೆಸುತ ಒರಿಸುವರು
೧೫
ಚೀನೀ ಜನರೇ ಗಟ್ಟಿಗರೆಂಬೆನು
ಕಾಯದ ಕಷ್ಟವ ತಡೆವುದಕೆ
ಬೆನ್ನೊಳು ಹೊರೆಯನು ಧರಿಸುತ ಶಿಖರವ
ನೇರುವುದು ನೋಡುವೆನು
೧೬
ತಲೆಯಾವರಿಸಿಹ ಗುರ್ಖಜನಂಗಳ
ಬೆಂಕಿಯ ಬಿದಿರಗಿಷ್ಟಿಕೆಯ
ಹೊಲಬನು ತಿಳಿಯಲು ತಲೆಯಲ್ಲಾಡಿಸಿ
ಕೇಳಿದೆ ಪಥಿಕರ ಕೌತುಕದೆ
೧೭
ನಗೆನಗೆಯಾಡುತ ಮೊಗವನು ನೋಡುತ
ತಿಳಿಯದ ಮಾತಿ೦ ಮೂದಲಿಸಿ
ಸಾಗುತ ಕರೆಯುವ ಪಥಿಕರ ನೋಡುತ
ಹೊರಳಿದೆ ಹೋಗುವ ದಿಶೆಗಾಗಿ
೧೮
ಹಿಂದು ಜನಾಂಗದ ಜಾತಿಗಳೆಲ್ಲವು
ಸ೦ದಿದ ನಿಯೋಗ ನಿಯಮವನು
ಇಂದಿಗು ಪಾಲಿಪ ಪರಿಯನು ತಿಳಿಯುತ
ವಿಸ್ಮಿತನಾದೆನು ಮನದಲ್ಲಿ
೧೯
ಓಡುತ ನೋಡಿದೆ ಕುರಡಿ ಬಾಝಾರವ
“ಸೆವಿಯರ ಹೊಟಲಿನ” ಮಾಟವನು
ಸೈನಿಕ ವೈದ್ಯಾಲಯವನ್ನು ನೋಡಿದೆ
ಮಾನವ ಮಮಕಾರಂಗಳನು
೨೦
ಓಡುತ ಡೆಹರಾಡೂನಿನ ಬೀಡಿಗೆ
ಸಾರಿದೆ ಸಂಧ್ಯಾಸಮಯದಲಿ
ಪಡುವಣ ನಿಟ್ಟದು ನೆರೆ ಸೆರೆಗೊಂಡಿತು
ತಪ್ಪಲದೊಪ್ಪಿನ ಸೀಮೆಯಲಿ
೨೧
ಸಂಧ್ಯಾಕಾಲದ ಸಂಜೆಯಗೆಂಪಿನ
ರಮಣೀಯತೆಯಾ ಒನಪನ್ನು
ಕಮಲಜ ಸೃಷ್ಟಿಯ ಕಮನೀಯತೆಯಾ
ಕೋಡಿನ ಕಲ್ಲೆನೆ ಕಾಣುತಿಹೆ
೨೨
ಯಾವುದು ನೋಡಲೊ ಯಾವುದು ಬಿಡಲೋ
ನೋಡುವದೆಲ್ಲವು ನೋಟವದು
ದೇವನ ಮಹಿಮೆಯ ಕಣ್ದೆರೆ ತೋರುವ
ಹಿಮಗಿರಿ ಸೀಮೆಯೆ ಮೋಕ್ಷವದು
*****
Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...