ಸಮುದ್ರ ನೀರಿನಿಂದ ತುಂಬಿದ್ದರು ಅದು ಉಪ್ಪು ನೀರಾದ್ದರಿಂದ ಯಾರೂ ಕುಡಿಯಲಾರರು. ನಮ್ಮ ಪೃಥ್ವಿಯನ್ನು ಆವರಿಸಿರುವ ನೀರಿನಲ್ಲಿ ಶೇ. ೯೭ ರಷ್ಟು ಭಾಗ ಸಾಗರಗಳಿಂದಲೇ ತುಂಬಿದೆ ಶೇ. ೨ ರಷ್ಟು ಮಾತ್ರನೀರು ದ್ರವ ಪ್ರದೇಶದಲ್ಲಿ ಮಂಜಿನ ಟೋಪಿಗಳಂತೆ ನಿಂತಿದೆ. ಉಳಿದ ಶೇ. ಒಂದು ಭಾಗ ಮಾತ್ರ ಕುಡಿಯಲು ಯೋಗ್ಯವಾಗಿದೆ. ಆದಾಗ್ಯೂ ಈ ಒಂದು ಪರ್ಸಂಟು ನೀರಿನಲ್ಲೂ ಹಲವು ಭಾಗ ಭೂಗರ್ಭದಲ್ಲಿ ಸೇರಿರುವುದರಿಂದ ನಾವು ಉಪಯೋಗಿಸುವುದು ಕೇವಲ ೦.೬ ಭಾಗ ಮಾತ್ರವೆಂದರೆ ಆಶ್ಚರ್ಯವೇ? ಶೇ. ೯೭ ರಷ್ಟು ವ್ಯಾಪಿಸಿರುವ ಸಮುದ್ರದ ನೀರನ್ನು ಸಿಹಿಗೊಳಿಸಿ ಉಪಯೋಗಿಸುವುದು ಹೇಗೆ? ಸಾಗರ ಜಲದಿಂದ ಉಪ್ಪನ್ನು ಬೇರ್ಪಡಿಸುವುದು ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ, ಮತ್ತು ಅರ್ಥಶಾಸ್ತ್ರಗಳ ಮೆಧಾವಂತರು ಒಟ್ಟಿಗೆ ಕುಳಿತು ಪ್ರಯತ್ನಿಸಿದರೆ ಈ ಉಪ್ಪು ನೀರು ಸಿಹಿಯಾಗಬಹುದು. ನಿರಂತರ ಸಂಶೋಧನೆಗಳ ಫಲವಾಗಿ ಸಮುದ್ರದಿಂದ ಕುಡಿಯುವ ನೀರನ್ನು ತಯಾರಿಸುವ ಹಲವು ವಿಧಾನಗಳು ಬೆಳಕಿಗೆ ಬಂದಿವೆ. ಅವು ಈಗ ಅಚ್ಚರಿಯಲ್ಲಿಯೂ ಇವೆ. ನಿಲವರ್ಣೀಕರಣ ವಿಧಾನದಲ್ಲಿ ಮುಖ್ಯವಾಗಿ ದ್ರಾವಣದಿಂದ (ಉಪ್ಪು ನೀರಿನಿಂದ) ಶುದ್ಧನೀರನ್ನು ಬೇರ್‍ಪಡಿಸುವ ಮತ್ತು ದ್ರಾವಣದಿಂದ ಲವಣಗಳನ್ನು ಬೇರ್ಪಡಿಸುವ ವಿಧಾನಗಳೇ ಪ್ರಧಾನವಾಗಿದೆ. ಭಟ್ಟಿ ಇಳಿಸುವಿಕೆ ಅಥವಾ ಆವಿ ಗೊಳಿಸುವಿಕೆ, ಹೆಪ್ಪುಗಟ್ಟಿಸುವಿಕೆ ಮತ್ತು ಸೌರ ಶಕ್ತಿಯಿಂದ ಆವಿಗೊಳಿಸುವಿಕೆ ಇವು ಮೊದಲನೆ ವರ್ಗಕ್ಕೆ ಸೇರಿದ ಮುಖ್ಯವಿಧಾನಗಳು. ದ್ರಾವಣದಿಂದ ಲವಣಗಳನ್ನು ಬೇರ್ಪಡಿಸುವ ವಿಧಾನಗಳಲಿ ಪ್ರಮುಖವಾದುದು ವಿದ್ಯುತ್‌ಶಕ್ತಿಯ ಸಹಾಯದಿಂದ ನಡೆಸುವ ಪಾರ ಪೃಥಕ್ಕ್ರರಣ (ಎಲೆಕ್ಟ್ರೋಡಯಾಲಿಸಿಸ್)
ಭಟ್ಟಿ ಇಳಿಸುವಿಕೆ : ಸಮುದ್ರದ ನೀರನ್ನು ಒಂದು ಪಾತ್ರೆಯೊಳಗಿಟ್ಟು (ಬಾಯ್ಲರ್) ಕುದಿಸಿದರೆ ಆವಿಯು ಮೇಲೇರಿ ಅಡಿಯಲ್ಲಿ ಲವಣಗಳು ಉಳಿಯುತ್ತವೆ. ಕುಡಿಯುವ ನೀರಿನಿಂದೆದ್ದ ಆವಿಯನ್ನು ತಂಪು ಮಾಡುವುದರಿಂದ ಕುಡಿಯಲು ಯೋಗ್ಯವಾದ ಶುದ್ದನೀರು ದೊರೆಯುತ್ತದೆ.
ಸೂರ್ಯನ ಶಕ್ತಿಯಿಂದ: ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸೌರಶಕ್ತಿಯನ್ನು ಉಪಯೋಗಿಸಬಹುದು. ಇದಕ್ಕೆ ಉರುವಲು ಖರ್ಚು ಇಲ್ಲ. ವಿದ್ಯುತ್ ಶಕ್ತಿಯೂ ಬೇಕಿಲ್ಲ ಸೂರ್ಯನ ಬೆಳಕನ್ನು ಹೀರುವಂತೆ ಕಪ್ಪು ಬಣ್ಣವನ್ನು ಸಮುದ್ರದ ನೀರಿನಿಂದ ತುಂಬಿದ ಪಾತ್ರೆಯ ತಳಭಾಗಕ್ಕೆ ಲೇಪಿಸಿ ಆ ಪಾತ್ರೆಯನ್ನು ಶಾಖನಿರೊಧಕ ಕವಚದಲ್ಲಿ ಕೂಡಿಸಬೇಕು. ಇದರ ಮುಚ್ಚಳ ಗಾಜಿನದಿದ್ದು ಓಲುವಂತೆ ಕೂಡಿಸಲಾಗುತ್ತದೆ. ಸೂರ್ಯನ ಶಾಖದ ಪರಿಣಾಮದಿಂದ ಉತ್ಪತ್ತಿಯಾಗುವ ನೀರಿನ ಆವಿಯು ಮೇಲೆರುತ್ತಿದ್ದಂತೆ ಇಳಿಜಾರಿನಂತಿದ್ದ ಗಾಜಿನ ಮುಚ್ಚಿಳದಿಂದ ತಡೆಯಲ್ಪಟ್ಟು ನೀರಿನ ಹನಿಗಳಾಗಿ ಹರಿದು ಅಡಿಯಲ್ಲಿಟ್ಟಿರುವ ವಿಶೇಷ ಪಾತ್ರೆಯಲ್ಲಿ ಶೇಖರವಾಗುತ್ತದೆ. ಈ ವಿಧಾನದ ಮುಖ್ಯ ಅನಾನುಕೂಲವೆನೆಂದರೆ ಇದು ಪ್ರಕೃತಿ ನಿಯಂತ್ರಿತವಾದುದು. ಸೂರ್ಯನ ಬೆಳಕಿದ್ದಾಗ ಈ ವಿಧಾನ ಕಾರ್ಯ ಸಾಧ್ಯ.
ಹೆಪ್ಪುಗಟಿಸುವಿಕೆ : ಸಮುದ್ರದ ನೀರನ್ನು ಹೆಪ್ಪುಗಟ್ಟಿಸುವುದರಿಂದ ಲವಣ ರಹಿತ ಮಂಜಿನ ಹರಳುಗಳು ಲವಣಗಳಿಂದ ಬೇರೆಯುತ್ತವೆ. ಕೊಂಚವೇ ಶಾಖವನ್ನು ಉಪಯೋಗಿಸಿದರೆ ಸಾಕು. ಸಮುದ್ರದ ನೀರು ಮಂಜುಗಡ್ಡೆಯಾಗುತ್ತದೆ. ಈ ಮಂಜುಗಡ್ಡೆಯನ್ನು ಮಾಡಿ ಕರಗಿಸಿದರೆ ಒಳ್ಳೆಯ ಕುಡಿಯುವ ನೀರು ಲಭಿಸುತ್ತದೆ.
ವಿದ್ಯುತ್ ಶಕ್ತಿ ಸಹಾಯದಿಂದ : ಅತಿಸೂಕ್ಷ್ಮವಾದ ಪೊರೆಯಂತಹ ಪದರುಗಳನ್ನು ರಾಸಾಯನಿಕವಾಗಿ ಸಿದ್ಧಗೊಳಿಸಿ ಅದರ ಮೂಲಕ ಸಮುದ್ರದ ನೀರನ್ನು ಹಾಯಿಸಿ ಒಳ್ಳೆಯ ನೀರನ್ನು ಪಡೆಯಬಹುದು. ಈ ವಿಧಾನಕ್ಕೆ “ಪಾರಪೃಧಕ್ಕರಣ” ಎಂದು ಹೆಸರು. ಪೊರೆಗಳ ಮೂಲಕ ಸಮುದ್ರದ ನೀರನ್ನು ಪಂಪ್‍ಮಾಡಿ ವಿದ್ಯುತ್ತನ್ನು ಹರಿಸುವುದರಿಂದ ಅವುಗಳ ಒಂದು ಪಕ್ಕಕ್ಕೆ ಲವಣಾಂಶರಹಿತ ಕುಡಿಯುವ ನೀರು, ಮತ್ತೊಂದು ಪಕ್ಕಕ್ಕೆ ಲವಣಗಳು ಶೇಖರವಾಗುತ್ತವೆ. ಇದಕ್ಕೆ ಕಾರಣ ಲವಣಗಳನ್ನು ವಿದ್ಯುತ್ತು ಆಕರ್ಷಿಸುವುದೇ ಆಗಿದೆ. ಈ ಪೂರೆಗಳು ಆಯಾಣು ವಿನಿಮಯ ರಾಳಗಳಂತೆ ಕೆಲಸ ಮಾಡುತ್ತವೆ. ಈ ವಿಧಾನವು ಇನ್ನು ಪರಿಶೋಧನೆಯ ಘಟ್ಟದಲ್ಲಿದೆ.
*****