ನಾಯಿಮಕ್ಕಳು ನಾವು-ಅರಸು ಮಕ್ಕಳು ತಾವು !….
ನಾವು ನಿಷ್ಪಾಪರೆಂದೊಂದುಕೊಂಡವರಾರು….?
ಜನ್ಮದಿಂ ಜನ್ಮಕ್ಕೆ ಉಡುಗಿ ಗೂಡಿಸಿ ತಂದ
ತೊಡಕುಗಳ ಮಾಲೆ ನಮ್ಮೆದಿಯಲ್ಲಿ ಜೋಲಾಡು-
ತಿದೆ; ಬೆನ್ನ ಬಿಡದೆ ಬರುತಿದೆ ಕರ್‍ಮವಿಧಿ ವಧುವಿ
ನೊಲು; ತಲೆಗೆ ಭಾರವಾಗಿಹುದು ಅಪರಂಪಾರ
ವಾದ ದುಃಖದ ರಾಶಿ,-ಬೆಂಡು ಹೂ ಬಾಸಿಂಗ-
ದಂತೆ ತೋರಿಕೆಯಿಂದ ಮೆರೆದು ಹಣೆಯೊತ್ತುವದು.
ಸ್ವರ್‍ಗಸೋಪಾನಕ್ಕೆ ಕಾಲಿಡಲು ಬಯಸಿ ಮದ-
ವೆದ್ದು ಬಹ ಗಜಲಕ್ಷ್ಮಿಯೊಡನೆ ಬಹರೆ, ಪರಾಕು !
ಹಾದಿಯಲಿ ಹಳ್ಳವಿದೆ. ಕಳ್ಳಹುದುಲಿನ ದಂಡೆ
ಆಚೆ ಈಚೆಗೆ ಚಾಚಿಕೊಂಡು ಜಪ್ಪಿಸುವಂತೆ
ಸದ್ದಿಲ್ಲದಲೆ ಬಿದ್ದುಕೊಂಡಿಹುದು. ದಾಟಿ ಹೋ-
ಗುವ ಸಂಭ್ರಮದಿ ಲೂಟಿಯಾಗಿ ಹೋಗುವದುಂಟು!
ಪುಣ್ಯವಂತರು ಮಾತ್ರ ಜೋಕೆಯಿರಲಿ !
ಕೆಳಗುವೇಲಾಗದೊಲು ತೂಕವಿರಲಿ !!
*****


















