ತಡಸಲು ತಡಸಲು ಅಗೊ ಅಲ್ಲಿ,
ದಡದಡ ಎನುವದು ಎದೆ ಇಲ್ಲಿ.
ದಿಡುಗದೊ ಗುಡುಗುಡು ಗುಡುಗುತಿದೆ
ಗಿಡ, ಮರ, ಜನ, ಮನ ನಡುಗುತಿದೆ.
ಗುಡುಗೇ ನೀರಾಗಿಹುದಲ್ಲಿ,
ಮೋಡ ಹುಟ್ಟುತಿದೆ ಮಳೆಯಲ್ಲಿ;
ತುಂತುರ ಮಳೆ ಹೊಳೆಯಂಚಿಗಿದೆ,
ನೀರೇ ಮಿರಿ ಮಿರಿ ಮಿಂಚುತಿದೆ.
ಮುತ್ತಿನ ಸರಗಳು ಹರಿಯುತಿವೆ
ಗಾಜುಗಂಬಗಳು ಸುರಿಯುತಿವೆ
ಕಾಮನಬಿಲ್ ಮಣಿದಾಡುತಿವೆ
ನೀರಿನ ಹೂ ಕುಣಿದಾಡುತಿವೆ
ನೆಲಮುಗಿಲ್ಗಳ ನಡುವಿನ ಬೆಡಗು
ರಮ್ಯಭಯಂಕರವೀ ದಿಡುಗು!
ಅದ್ಭುತ ಕರೆವುದು ‘ಬಾ ಇಲ್ಲಿ; ’
ಭಯ ಗದರಿಸುತಿದೆ ‘ನಿಲ್ಲಲ್ಲಿ’
ಮನ ಧುಮುಕುತ್ತಿದೆ ಹೊಳೆಯಂತೆ
ಸ್ತಂಭಿತ ಮೈ ತಡಸಿಲಿನಂತೆ.
ನಿಂತಲ್ಲಿಯೆ ಕಾಲಂಟಿತ್ತು
ಊಹೆ ದಿಗಂತಕೆ ಹೊಂಟಿತ್ತು.
*****