ದಾರಿಹೋಕನೆ! ಕೇಳು! ನಾನಿರುವೆನೇಕಾಂಗಿ!
ರಾಜನೀಧಿಯಲಲೆಯುತಿರುವೆ ನಾನನುದಿನವು.
ಕಾಯುವೆನು ಮಂದಿರದ ಒಳಹೊರಗು, ಜನಮನವು
ಒಲಿಯಬಹುದೇನೆಂದು. ಒಂದು ಮರದಡಿ ತಂಗಿ
ನೋಂತಿಹೆನು ಚಾತಕವ್ರತದಿ ದುಃಖವ ನುಂಗಿ!
ಆರೋಗಣೆಯು ಇಲ್ಲ; ಇಲ್ಲದಾಗಿದೆ ತನುವು!
ಕೊರಗುವೆನು ಯಾರಿಲ್ಲವೆಂದು ನನಗಿಂತನುವು-
ಆಪತ್ತು ಬರಲೊಮ್ಮೆ. ಎಲ್ಲರೆದೆಯೊಳಗಿಂಗಿ
ಕಾಣದಾಗಿದೆ ನಲುಮೆ. ಅಂಗವಿಸಿ ಬಹ ಮಂದಿ
ಶೃಂಗರಿಸುವರು ನನ್ನ ಪ್ರತಿಮೆಯನು, ಕಂಡರಿಸು-
ವರು ಶಿಲಾಮೂರ್‍ತಿಯನು! ಭೇದಿಸುವರಿಂತೆನ್ನ
ಹೃದಯವನು. ಯಾವ ಯಾತ್ರಿಕರು ಮಂತ್ರಿಸಿ ಸ್ಫುರಿಸು-
ವರೊ ನನ್ನ ಭಾವನೆಯ, ನನ್ನ ಸನ್ನಿಧಿ ಹೊಂದಿ,–
ಮಾರಿಕೊಂಡಿಹೆನವರ್‍ಗೆ ಮೀಸಲಾಗಿಹ ನನ್ನ!
*****