Home / ಕಥೆ / ಕಾದಂಬರಿ / ಮಲ್ಲಿ – ೪೬

ಮಲ್ಲಿ – ೪೬

ರಾಣಿಗೆ ನೋವು ಎತ್ತಿದೆ. ಈಸಲ ಆನಂದಮ್ಮ ಮಲ್ಲಿ ಇಬ್ಬರೂ ಸಿದ್ದರಾಗಿದ್ದಾರೆ. ಹೆಸರಿಗೆ ಡಾಕ್ಟರ್ ಮಿಡ್‌ವೈಫ್ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನೂ ತಾನೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮ್ಮನು ವಯಸ್ಸಾದ ಅಜ್ಜಿಯರನ್ನೆಲ್ಲ ಕಂಡು ಮಗು ಹುಟ್ಟುವುದಕ್ಕೆ ಮುಂಚೆ ಏನು ಮಾಡಬೇಕು ಎಂಬು ದನ್ನು ತಿಳಿದುಕೊಂಡು ಬಂದಿದ್ದಾಳೆ. ನೋವು ಎತ್ತಿಡಕೂಡಲೇ ಏನೋ ಕಷಾಯ ಕೊಟ್ಟರು, ನೋವು ಬಲವಾಯಿತು. ಹುಲ್ಲು ಅರಿಶಿನದೆಣ್ಣೆ ಮಂತ್ರಿಸಿಕೊಟ್ಟರು. ಅದು ಕೊಟ್ಟ ಐದು ನಿಮಿಷದಲ್ಲಿ ಜನನವಾಯಿತು. ಡಾಕ್ಟರು ನಾಯಕನಿಗೆ ಸೂಚನೆ ಕೊಟ್ಟಿದ್ದರು. “ವಯಸ್ಸಾದಮೇಲೆ ಆಗಿರುವ ಗರ್ಭ. ಆದಷ್ಟು ಹುಷಾರಾಗಿರ ಬೇಕು” ಎಂದು. ದೇವರ ದಯ. ಗರ್ಭವು ಮೈ ಬಿಟ್ಟು ಸುಖವಾಗಿ ಕಳೆಯಿತು. ಹೂವಿನ ಸರವೆತ್ತಿದಷ್ಟು ಸುಲಭವಾಗಿ ಹೆರಿಗೆಯಾಯಿತು.

ಆನಂದಮ್ಮನು ಮಿಡ್‌ನೈಫ್ ಜೊತೆಯಲ್ಲಿ ರಾಣಿಗೆ ಉಪಚಾರ ಮಾಡುತ್ತಿರುವಾಗ ಇತ್ತ ಮಲ್ಲಿಯು ಮಗುವನ್ನು ನೋಡಿದಳು. ಗಂಡು ಮಗು. ಮುದ್ದಾಗಿದೆ. ಎಲ್ಲಾ ತನ್ನ ಮಗುವಿನ ಪ್ರತಿಬಿಂಬ. ಅವಳಿಗೆ ಬಹು ಸಂತೋಷವಾಗಿದೆ. ಹಾಗೇ ಆ ಮಗುವನ್ನು ತೆಗೆದು ಕೊಂಡು ಹೋಗಿ ಗಂಡನಿಗೆ ತೋರಿಸಬೇಕು ಎಂದು ಅವಸರ. ಆದರೆ ಅದಕ್ಕೆ ಸ್ನಾನಾದಿಗಳು ಆಗಬೇಕಲ್ಲ !

ಮಗುವಿಗೆ ಸ್ನಾನ ಮಾಡಿಸಿ ಅದನ್ನು ಬೆಚ್ಚಗೆ ಮೊರದಲ್ಲಿ ಮಲಗಿಸಿ ಆಯಿತು. ತಾನು ಕೈ ತೊಳೆದುಕೊಂಡು ಒರೆಸಿಕೊಂಡಳು. ಇನ್ನೂ ಟವಲು ಕೈಯನ್ನು ಒರೆಸುತ್ತಿದೆ. ಆಗಲೇ ಗಂಡನನ್ನು ಕೂಗಲು ಹೊರಟಳು. ನಡುಮನೆಯಲ್ಲಿ ಸೋಫಾದ ಮೇಲೆ ನಾಯಕನು ಕುಳಿತು ನಿರೀಕ್ಷಿಸುತ್ತಿದ್ದಾನೆ. ಮಲ್ಲಿಯು ಬಂದು,

“ಬುದ್ಧಿ, ದೇವರು ತಮಗೆ ಮಗನ್ನ ಕೊಟ್ಟಿದ್ದಾನೆ ” ಎಂದಳು.

ನಾಯಕನು ಸಂತೋಷದಲ್ಲಿ ಬರಸೆಳೆದು ಅಪ್ಪಿದನು. ತನ್ನ ಸೌಭಾಗ್ಯದೇವಿಯನ್ನು ಆರಾಧಿಸುವವನಂತೆ ಅವಳ ಮೇಲೆ ಮುತ್ತಿನ ಮಳೆಗರೆದನು. ಅವಳು ಅದಷ್ಟೂ ಆದರದಿಂದ ಸ್ವೀಕರಿಸಿ,

“ಹುಚ್ಚು ದೊರೆ ಇದಿಷ್ಟೂ ದೊಡ್ಡ ಮ್ಮಣ್ಣಿಯವರಿಗೆ ಸಲ್ಲ ಬೇಕಾದ್ದು. ನಿಮ್ಮ ವಂಶದ ರತ್ನದೀಪವನ್ನು ಬೆಳಗಿಸಿದವರು ಆ ಮಹಾ ತಾಯಿ, ಈ ದಾಸಿಯಲ್ಲ.” ಎಂದಳು,

ನಾಯಕನು ಹಾಗೆಯೇ ಆ ದೃಢಾಲಿಂಗನದಲ್ಲಿಯೇ “ಹೌದು ಮಲ್ಲಿ, ರಾಣಿ ಕೊಟ್ಟುದು ವಂಶದ ಭಾಗ್ಯ. ನೀನು ಬಂದುದು ನನ್ನ ಭಾಗ್ಯ. ” ಎಂದು ಮತ್ತೆ ಮುತ್ತಿಟ್ಟು ಕೊಂಡನು.

ಮಲ್ಲಿಯು ನಾಯಕನ ಕೈ ಹಿಡಿದು ಕರೆದುಕೊಂಡು ಬಂದು ಹೆರಿಗೆಯ “ಮನೆಯ ಬಾಗಿಲಲ್ಲಿ ಒಂದು ಕುರ್ಚಿ ಹಾಕಿ ಕುಳ್ಳಿರಿಸಿ ಹೋಗಿ ಮಗುವನ್ನು ತಂದುತೋರಿಸಿದಳು.

ನಾಯಕನಿಗೆ. ಮಗುವನ್ನು ನೋಡಿ ಪರಮ ಹರ್ಷವಾಯಿತು. ಮಗುವನ್ನು ಎತ್ತಿಕೊಳ್ಳಲು ಕೈ ನೀಡಿದನು. ಮಲ್ಲಿಯೂ ಆ ಮಗುವನ್ನು ಹಿಂದಕ್ಕೆ ತೆಗೆದುಕೊಂದು “ಉಂಟಾ [ ಊರಿಗೆಲ್ಲಾ ಸಕ್ಕರೆ ಹಂಚಿ ನನ್ನ ಮುಟ್ಟಬೇಕು.” ಎಂದಳು.

“ಮಗುವಿನ ತಾಯಿ ಹೆಂಗಿದ್ದಾರೆ ?” ನಾಯಕನು ಕೇಳಿದನು.

“ಗಂಜಿ ಬಸಿದ ಅನ್ನದ ಹಂಗೆ ಭೇಷಾಗಿದ್ದಾರೆ” ಮಲ್ಲಿಯೇ ಉತ್ತರ ಹೇಳಿದಳು.

ನಾಯಕನು ಸಂತೋಷದ ಮೂಟೆಯಾಗಿ ಹೊರಗೆ ಬಂದನು.

ಅವನು ಇನ್ನೂ ಬಂದು ಸೋಫಾದಲ್ಲಿ ಕುಳಿತುಕೊಳ್ಳುತ್ತಿದ್ದ ಹಾಗೆಯೇ ನರಸಿಂಹಯ್ಯನು ಬಂದನು. ನಾಯಕನು ಸಂಭ್ರಮದಿಂದ ಆತನನ್ನು ಬರಮಾಡಿಕೊಂಡು, ತಾನೇ ಓಡಿಹೋಗಿ “ಮಲ್ಲಿ, ಮಲ್ಲಿ, ಮೇಷ್ಟು ಬಂದಿದ್ದಾರೆ ಎಂದನು. ಮಲ್ಲಿಯು “ಆಂ ನಿಜವಾಗಿ?” ಎಂದು ಮಗುವನ್ನು ಮಲಗಿಸಿ ಒಡೋಡಿ ಬಂದಳು.

ಅವಳಿಗೆ ನರಸಿಂಹಯ್ಯ ನನ್ನು ನೋಡಿ ಪರಮಾನಂದವಾಯಿತು. ಅದುವರೆಗೂ “ಮೇಷ್ಟ್ರೆ! ಎನ್ನುತ್ತಿದ್ದವಳು, “ಗುರುವೇ ! ಮಹಾನುಭಾವ!” ಎಂದು ಓಡಿಹೋಗಿ ಆತನ ಪಾದಗಳನ್ನು ಹಿಡಿದು ನಮಸ್ಕಾರ ಮಾಡಿದಳು. ನಾಯಕನು ತಾನು ಏಕೆ ಹಾಗೆ ಮಾಡುತ್ತಿರುವೆನು ಎಂಬುದನ್ನು ಅರಿಯದೆಯೇ, ತಾನೂ ನಮಸ್ಕಾರ ಮಾಡಿದನು. ಮಲ್ಲಿಯು ತುಂಟತನದಿಂದ “ಬುದ್ದಿಯವರಿಗೆ ಈಗತಾನೇ ಪುತ್ರೋತ್ಸವ ವಾಯಿತು. ಅದಕ್ಕೆ ತಮ್ಮ ಗುರುಗಳಿಗೆ ಪಾದಪೂಜೆ ಮಾಡುತ್ತಿದ್ದಾರೆ.” ಎಂದು ಕಿಲಕಿಲನೆ ನಕ್ಕಳು.

ನರಸಿಂಹಯ್ಯನು “ಹಾಗೇನು! ಅದರಿಂದಲೇ ಮೇಷ್ಟ್ರು ಮಹಾನುಭಾವನಾದುದು !” ಎಂದು ತಾನೂ ನಕ್ಕನು.

ಮಲ್ಲಿಯು “ಅದಕ್ಕೆ ಉತ್ತರ ಆಮೇಲೆ ಕೊಡುತ್ತೇನೆ, ಗಾಂಧಿ ಯವರು ಹೇಗಿದ್ದಾರೆ ? ಎಲ್ಲಿದ್ದಾರೆ 7? ಎಂದು ಒಂದೇ ಉಸಿರಿನಲ್ಲಿ ಕೇಳಿದಳು.

ನರಗಿಂಹಯ್ಯನು ಹೇಳಿದನು: “ರೋಗಮುಕ್ತರಾಗಿದ್ದಾರೆ. ಆದರೆ ಇನ್ನೂ ನಿಶ್ಯಕ್ತಿ ತಪ್ಪಿಲ್ಲ. ಇನ್ನೂ ಉಪಚಾರವಾಗಬೇಕು. ಮೈಸೂರು ಮಹಾರಾಜರು ದಿವಾನರ ಮೂಲಕ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಅವರೂ ಅಂಗೀಕರಿಸಿದ್ದಾರೆ. ಬಂದು ನಂದಿಯಲ್ಲಿ ಎರಡು ತಿಂಗಳು ಇರುತ್ತಾರೆ ”

ಮಲ್ಲಿಗೆ ಎಲ್ಲೂ ಹಿಡಿಸಲಾರದಷ್ಟು ಆನಂದವಾಯಿತು : “ಬುದ್ಧಿ, ಮಹಾರಾಜರೇ ಕರೆದಿದ್ದಾರೆ ಅಂದಮೇಲೆ ತಾವು ಇನ್ನೂ ನಿರಾತಂಕ ವಾಗಿ ಬರಬಹುದಲ್ಲ. ಅಲ್ಲಿ ನಾವೂ ಒಂದು ಬಂಗಲೆ ತಕೊಂಡು ಇದ್ದು ಬಿಡೋವ” ಎಂದಳು. ನಾಯಕನು “ಸಂತೋಷವಾಗಿ” ಎಂದನು. ಆತನ ದೇಹದ ನರನರವೂ ಆ ಸಂತೋಷವಾಗಿ ಎಂಬ ಮಾತನ್ನು ವೀಣೆ ನುಡಿದಂತೆ ನುಡಿಯಿತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...