ಬಿರುಗಾಳಿಯ ಎದುರು
ಉರೀದಿತು ಯಾವ ದೀಪ?
ಸಮುದ್ರದಲೆಗಳ ಎದುರಿಸಿ
ಯಾವ ಗೋಡೆ ತಾನೆ ನಿಂತೀತು?
ಭಯಂಕರ ಅಲೆ ಬಿರುಗಾಳಿಗೆ
ಬೆದರದೇ ಬೆಚ್ಚದ ಉರಿಯುತ್ತಿದೆ
ನೋಡು ಪ್ರೀತಿಯ ದೀಪ.
ತೇಲಿ ಹೋದಳು ನೋಡು ಕನಸುಗಾತಿ
ನೀರಮೋಡಗಳ ರಥವನ್ನೇರಿ
ಕಳೆದು ಹೋದಳು ಹುಡುಗಿ
ಕನಸಿನ ಮಾಯಾ ಲೋಕದಲಿ
ಪ್ರೀತಿ ಎಳೆಗಳ ಬೆಸೆಯುತ್ತ
ಅಮೃತದ ಸಿಂಚನ ನೀಡುತ್ತ.
ಗುಡುಗು ಸಿಡುಲಿನ ಶಬ್ದಕೆ
ಗಕ್ಕನೆ ಬೆಚ್ಚಿ ಬಿದ್ದಿತು ಮಗು
ತೊಟ್ಟಿಲ ಕಂದ ಬೆದರಿದ ಅಳುವಿನಲಿ
ಅಮ್ಮನ ಸಾಂತ್ವನದ ಅಪ್ಪುಗೆ
ಜನ್ಮ ಜನ್ಮಗಳ ಭದ್ರತೆಯ ಬೆಸುಗೆ.
ಮುಗಿಲ ಮಧ್ಯದ ಕಿಂಡಿಯಿಂದ
ಹನಿಯೊಡೆದು ತೊಟ್ಟಿಕ್ಕುವ ಕನಸುಗಳು
ಮಸಮಸುಕು ತಾರೆಗಳ ತೋಟದಲ್ಲಿ
ಪಟ ಪಟನೆ ಉದುರುವ ಹಣ್ಣಲೆಗಳ ಶಬ್ದ
ಜೋಗುಳದ ಇಂಪು ಮಣ್ಣವಾಸನೆಯ ಕಂಪು.
ಸಾಗಿ ಹೋದಳು ಹುಡುಗಿ
ಕನಸಿನ ಮಾಯಾ ಲೋಕಕೆ
ನೀರ ಮೋಡಗಳ ರಥವನ್ನೇರಿ
ಪ್ರೀತಿ ಎಳೆಗಳ ಬೆಸೆಯುತ್ತ
ಬೆಚ್ಚನ ಭರವಸೆಗಳ ನೀಡುತ್ತ……..
*****



















