ಬುದ್ಧನ ಹುಡುಕಿದೆ.
ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ
ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ
ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ
ಮುಗ್ಧ ಮುಗುಳು ನಗೆಯ ಬೆಳಕಲ್ಲಿ
ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ.
ಬುದ್ಧನ ಹುಡುಕಿದೆ.
ಬೆಳಗು ಮುಂಜಾವಿನ ಬಿದ್ದ ಕನಸಿನಲಿ
ಹುಲ್ಲ ಮೇಲಿನ ಇಬ್ಬನಿ ಕರಗಿ ಮೋಡವಾಗುವಲ್ಲಿ
ಅಕ್ಷರಗಳು ಅಜ್ಞಾನ ಸುಡುವ ಸಾಕ್ಷಿ -ಪ್ರಜ್ಞೆ ಅರಳುವಲ್ಲಿ
ಅಹಮ್ಮನ್ನು ಅಗ್ನಿಗರ್‍ಪಿಸಿದ ಆತ್ಮದ ಪ್ರಭೆಯಲ್ಲಿ.
ಬುದ್ಧನ ಹುಡುಕಿದೆ
ಶಬ್ದ ಸಂತೆಯಲ್ಲಿ ನಿಶಬ್ಧ ಗೂಡುಗಳಲ್ಲಿ
ಮಹಾ ಮೌನದ ಘನತೆಯ ನಡೆಯಲ್ಲಿ
ನೆಲದ ತುಂಬ ಬೆಳಕಿನ ಬೀಜ ಬಿತ್ತುವಲ್ಲಿ
ಶಾಂತಿ ಪ್ರಭೆಯ ಚಿಗುರು ಮೊಳೆಯುವಲ್ಲಿ.
ಬುದ್ಧನ ಹುಡುಕಿದೆ.
ಬೋಧಿವೃಕ್ಷದ ನೆರಳಿನಲ್ಲಿ ಜ್ಞಾನ ಬೆಳಕಿಲ್ಲಿ
ಬುದ್ಧಗಯಾದ ಎಲೆ ಮೇಲಿನ ಇಬ್ಬನಿಯಲ್ಲಿ
ಕೋಗಿಲೆಯ ಇಂಪಾದ ಶಾಂತಿ ಸಂದೇಶದಲ್ಲಿ
ಉದಾತ್ತ ನಿಲುವಿನ ಆ ಭವ್ಯ ಭಂಗಿಯಲ್ಲಿ
ಬುದ್ಧನ ಹುಡುಕಿದೆ.
ಊರು ಕೇರಿಯ ವಧಾಸ್ಥಾನಗಳಲ್ಲಿ
ಚಿತ್ತಕ್ಕೆ ಹತ್ತಿದ ಬೆಂಕಿ ಉರಿಯುವಲ್ಲಿ
ಪ್ರೀತಿ ಲೋಕದ ಬೀಜ ಮೊಳೆಯುವಲ್ಲಿ
ಮನದ ಕೋಣೆಯಲಿ ಮಬ್ಬು ಪ್ರಜ್ವಲಿಸುವಲ್ಲಿ
ಕರುಣಾರಸದಲ್ಲಿ ತೊಯ್ದ ಅದ್ದಿದ ಭಾವಗಳಲಿ.
ಬುದ್ಧನ ಹುಡುಕಿದೆ.
ನಿದ್ದೆಯಿಂದೆದ್ದು ನಡೆದ ಬರಿಗಾಲು ನಡಿಗೆಯಲ್ಲಿ
ನಾಡ ತುಂಬ ಮೂಡಿದ ಹೆಜ್ಜೆ ಗುರುತುಗಳಲ್ಲಿ
ಬತ್ತಿಹೋದ ಕರುಳ ಬಳ್ಳಿಯ ಸಂಬಂಧಗಳಲ್ಲಿ
ಇಬ್ಬನಿ ಹನಿಗೆ ಅಮರತ್ವದ ಆಸೆ ಚಿಗುರುವಲ್ಲಿ.
ಬುದ್ಧನ ಹುಡುಕಿದೆ.
ರಸ್ತೆಗಂಟಿದ ರಕ್ತ ಕಲೆಗಳ ತೊಳೆವ ಮಳೆ ಹನಿಗಳಲ್ಲಿ
ಕ್ರೌರ್‍ಯತುಂಬಿರುವಲ್ಲಿ, ಪ್ರೀತಿಯ ಸಾಗರಗಳಲ್ಲಿ
ಟಾರು ರಸ್ತೆಯ ಕಲೆಗಳೇನೋ ತೊಳೆದು ಹೋದವು
ಬಿದ್ದ ಹನಿಗಳ ಹೀರಿಕೊಳ್ಳಲು ನೆಲವೇ ಇಲ್ಲವಲ್ಲ
ಬರೀ ಹಾರ್‍ನು, ಸಿಗ್ನಲ್ಲು, ಟ್ರಾಫಿಕ್ಕು, ಕಾಂಕ್ರೀಟು ಬರೀ ಧೂಳು
ಬರಡು ಕಾಂಕ್ರೀಟು ಕಾಡಿನಲ್ಲಿ ಎಲ್ಲಿ ಹುಡುಕಲಿ ನಿನ್ನ
ಬುದ್ಧ ಎಲ್ಲಿ ಹುಡುಕಲಿ ನಿನ್ನ?
*****