ನನಗೂ ಆಸೆ ಕವಿತೆ ಬರೆಯಲು
ಭಾರತಾಂಬೆಯ ಮೇಲೆ
ಸತ್ಯವ ಮುಚ್ಚಿ ಸುಳ್ಳು ಹೇಳುವುದು
ಥರವೆ? ಗೆಳತಿ ಹೇಳೆ
ಭಾರತಾಂಬೆಯ ಒಬ್ಬ ಮಗ
ಇರುವನು ಊರ ಒಳಗೆ
ಇವನಿಗೆ ಸಹಜ ಭಾರತ ಮಹಾನ್
ನಾನು ಯಾರ ಧ್ವನಿಗೆ?
ಮೈಲಿಗೆ ತೊಳೆದ ಗಂಗೆ ತುಂಗೆ
ಕಾವೇರಿಗೆ ಒಂದೆ ನಮನ
ಮನದ ಮೈಲಿಗೆ ತೊಳೆಯುತ ಬಂದ
ತಾತ್ವಿಕರಿಗೆ ನೂರ್ ನಮನ
ಜಾತಿ ಹಲವು ಒಂದೆ ಒಲವು
ಇದು ಯಾವ ನಿಲುವು?
ಕಿಚ್ಚಿಗೂ ಜ್ಯೋತಿಗೂ ಇಲ್ಲವೆ ಭೇದ
ನಾನು ಯಾರ ಪರವು?
ಸುಳ್ಳು ಇಷ್ಟವೊ ಸತ್ಯ ಇಷ್ಟವೊ
ಹೇಳಲಿ ಭಾರತ ಮಾತೆ
ಕಟ್ಟಲು ಸೌಧ ನೆಲದ ಮೇಲೆ
ತೋರಿ ಮಕ್ಕಳಿಗೆ ಮಮತೆ
*****



















