ತೋಟಕ ಬಾರೆ ಬೆಳದಿಂಗಳ ಬಾಲೆ
ತೋಟಕೆ ಬಾ ಊಟಕೆ ಬಾ
ಕಾದಿರುವೆನು ನಾ
ಬೆಳದಿಂಗಳ ಬಾಲೆ
ಎಂತು ಅರಳಿವೆ ನೋಡು ಇರುಳ ಹೂವುಗಳು
ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ
ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ
ಇರುಳ ರಾಣಿಯರ ಕಂಪು ಹಗುರವಾಗಿ
ಇಬ್ಬನಿಯ ತಂಪು ಒಂದೊಂದು ಎಲೆಯಿಂದ
ಹನಿಯಾಗಿ ಬೀಳುವುದು ಹುಲ್ಲ ಮೇಲೆ
ತಿಳಿಮೋಡಗಳ ರಾಸಿ ಬಿಳಿಯಾಗಿ ಆಕಾಶ
ಗಾಳಿ ಸುಳಿಯುವುದು ಸ್ವಚ್ಛಂದದಿಂದ
ನೀ ಬಂದು ಮುಟ್ಟಿದರೆ ಮುಟ್ಟಿದುದು ಅಮೃತವೆ
ನೀ ಬಂದು ತಟ್ಟಿದರೆ ತಟ್ಟಿದುದು ಋತವೆ
ಕುಡಿದುದೇ ಪಾನ ಹಾಡಿದುದೆ ಗಾನ
ಮಾತನಾಡುವುದು ಯಾಮಿನಿಯ ಮೌನ
ಏನಿದದ್ಭುತವು
ಕಾನು ಬೆಳಗುವುದು ಕಾನನವು ಹೊಳೆಯುವುದು
ಜಗವೆ ತೊಳೆಯುವುದು
ಮನ ಬೆರಗಾಗುವುದು
ನೆಲಜಲ ಚರಾಚರವೆ ತುಡಿಯುವುದು
ಎದ್ದು ಕುಣಿಯುವುದು
ನಿನ್ನ ಆಗಮನಕೆ
ಗೀತ ನಿನ್ನದು ಸಂಗೀತ ನಿನ್ನದು
ರಾತ್ರಿ ಮುಗಿಯುವ ವರೆಗೆ
ಗಾಯನ ನಿನ್ನದು ನರ್‍ತನ ನಿನ್ನದು
ಇಡೀ ರಾತ್ರಿಯೇ ನಿನ್ನ ಸೆರೆಗೆ
ಗೆಜ್ಜೆ ನಿನ್ನದು ಹೆಜ್ಜೆ ನಿನ್ನದು
ಗೆಜ್ಜೆಪಾದದ ಲಜ್ಜೆಯೂ ನಿನ್ನದು
ಲಾಸ್ಯ ನಿನ್ನದು ಮೃದುಹಾಸ್ಯ ನಿನ್ನದು
ಮಧುರ ನಿನ್ನದು ಮಾಧುರ್‍ಯವೂ ನಿನ್ನದು
ಸಾವಿರ ವರ್‍ಷ ಬೇಡ
ಇನ್ನಿಲ್ಲದ ಹರ್‍ಷ ಬೇಡ
ನಿನ್ನೊಂದು ಸ್ಪರ್‍ಶವಲ್ಲದೆ
ನನಗಿನ್ನೇನು ಬೇಡ
ಕ್ಷಣವೊಂದೆ ಸಾಕು
ಅದುವೆ ಕಲ್ಪ ನನಗೆ
*****


















