“ಗುರುಗಳೇ! ನಾ ಪರಮ ಭಾಗ್ಯವಂತ.” ಎಂದು ಅತ್ಯಂತ ಸಂತೋಷದಿಂದ ಶಿಷ್ಯ ಮೇಲು ಧ್ವನಿಯಲ್ಲಿ ಹೇಳಿದ.
“ನಿನ್ನ ಸಂತೋಷಕ್ಕೆ ಕಾರಣವೇನು? ಶಿಷ್ಯಾ” ಎಂದು ಕೇಳಿದರು.
“ನಾನು ಬುದ್ಧನನ್ನು ಹುಡುಕಿ ಹೋದದ್ದು ನಿಮಗೆ ಗೊತ್ತಿದೆಯಲ್ಲವೇ.”
“ಅಹುದು, ಶಿಷ್ಯಾ- ನಿನ್ನ ಶೋಧನೆಯಲ್ಲಿ ಜಯವಾಯಿತೇ?”,
“ನನ್ನ ಕಣ್ಣು ಕೋರೈಸುವಷ್ಟು ಸಾವಿರಾರು ಬುದ್ಧರನ್ನು ಕಂಡೆ.”
“ಬುದ್ಧ ಒಬ್ಬನೇ ಅಲ್ಲವೇ? ನೀ ಅದು ಹೇಗೆ ಅಷ್ಟು ಬುದ್ಧರನ್ನು ಕಂಡೇ?” ಎಂದರು ಗುರುಗಳು.
“ಗುರುಗಳೇ! ನನ್ನ ಕಣ್ಣಿನಲ್ಲಿ, ಮನದಲ್ಲಿ, ಬುದ್ಧನನ್ನು ತುಂಬಿಕೊಂಡು ಹೊರಟಾಗ, ವನದ ವೃಕ್ಷದಲ್ಲಿ ಬುದ್ಧನನ್ನು, ಹೂವಿನಲ್ಲಿ ಬುದ್ಧನನ್ನು, ಫಲದಲ್ಲಿ ಬುದ್ಧನನ್ನು, ಸೂರ್ಯ ಚಂದ್ರರಲ್ಲಿ ಬುದ್ಧನನ್ನು ಕಂಡು ಧನ್ಯನಾದೆ. ಭೂಮಿಯಲ್ಲಿ ಬಿತ್ತಿದ ಬೀಜದಲ್ಲಿ
ಬುದ್ಧತ್ವ ಕಂಡೆ, ಬಾನಿನ ಸಾವಿರಾರು ನಕ್ಷತ್ರದ ತೇಜದಲ್ಲಿ ಬುದ್ಧತ್ವ ಕಂಡೇ.” ಎಂದು ಉದ್ಗಾರದಲ್ಲಿ ಶಿಷ್ಯ ಹೇಳಿದಾಗ ಗುರುವಿನ ಕಣ್ಣು ತುಂಬಿ ಬಂತು.
*****


















