ಕುಣಿ ಕುಣಿ, ನವಿಲೇ, ಕುಣೀ ಕುಣೀ
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ,
ತಾಪವ ನೀ ಮರೆ, ಕುಣಿ ಕುಣೀ || ೧ ||
ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣಿ ಕುಣೀ || ೨ ||
ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ || ೩||
ನಭಕ್ಕೆ ಏನಿದೆ ನೆಲದಲಿ ಆಸೆ ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾ ನಂದದ ಭಾಷೆ,
ನೆಲಮುಗಿಲನು ಹೆಣೆದೀತು ಮಳೆ;
ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು, ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ
*****