ಕೋಲೂ ಕೋಲಣ್ಣ ಕೋಲೇ || ರಣ್ಣದಾ
ಕೋಲೂ ಕೋಲಣ್ಣ ಕೋಲೇ || ಪ ||

ಊರಾನ ಗೌಡನ ಮಗಳು. ಊರಾನ ಗೌಡಾನಾ ಮಗಳೂ
ನೀರಿಗೆ ಹೋಗಳ್ಯಂತೆ ನೀರೀಗೆ ಹೋದಲ್ಲಿ || ೧ ||

ಕಟ್ಟೀ ಮೇನೋಂದು ಜಾಣಾ |
ಕಟ್ಟೀ ಕೈಹಚ್ಚೀ ವಗ್ದನಂತೇ | ರಣ್ಣದಾ || ೨ ||

ಕೋಲೂ ಕೋಲಣ್ಣ ಕೋಲೇ || ರಣ್ಣದಾ
ಕೋಲೂ ಕೋಲಣ್ಣ ಕೋಲೇ || ೩ ||

ರಟ್ಟೀ ಕೈಹಚ್ಚೀ, ವಗ್ದನಂಬೂ ಶಮ್ಯದಲ್ಲಿ
ಹಾರೂ, ಹದ್ದಾಗಿ, ಹಾರದಂತೆ ಹೆಣ್ಣೂ, || ೪ ||

ಹಾರೋ ಹದ್ದಾಗಿ ಹಾರಾಳಂಬೂ ಶಮ್ಯದಲ್ಲಿ
ಉಕ್ಕಿನಾ ಬಿಲ್ಲಿಟ್ಟೀ ಹೊಡ್ದನಂತೆ ಜಾಣಾ || ೫ ||

ಉಕ್ಕಿನ ಬಿಲ್ಲಿಟ್ಟೀ, ಹೊಡ್ದನಂಬೂ ಶಮ್ಯದಲ್ಲಿ
ಇಂಬೀ ಹಣ್ಣಾಗೀ ಉದ್ರಳಂತೆ ಹೆಣ್ಣೂ || ೬ ||

ಇಂಬಿರಿ ಹಣ್ಣಾಗೀ ಉದ್ರಳಂಬ ಶಮ್ಯದಲ್ಲಿ
ಉಕ್ಕಿನ ಚೂರೀಟ್ಟೀ ಕೊರ್‌ದನಂತೆ ಜಾಣಾ || ೭ ||

ಉಕ್ಕಿನ ಚೂರೀಟ್ಟೀ ಕೊರದನಂಬು ಶಮ್ಯದಲ್ಲಿ
ರಾಗೀ ಕಾಳ್ಯಾಗೀ, ಉದ್ರಳಂತೆ ಹೆಣ್ಣೂ || ೮ ||

ರಾಗೀ ಕಾಳ್ಯಾಗೀ ಉದ್ರಳಂಬು ಶಮ್ಯದಲ್ಲಿ
ಕೂಗೂ ಹುಂಜಾಗೀ ಕೊರ್‍ಕನಂತೆ ಜಾಣಾ || ೯ ||

ಕೂಗೂ ಹುಂಜಾಗೀ ಕೊರ್‍ಕನಂಬೂ ಶಮ್ಯದಲ್ಲಿ
ಹರ್‍ವಾ ಹಳ್ಳಾಗೀ ಹರ್‌ದಳಂತೆ ಹೆಣ್ಣೂ || ೧೦ ||

ಹರ್‍ವಾ ಹಳ್ಳಾಗೀ ಹರ್‌ದಳಂಬೂ ಶಮ್ಯದಲ್ಲಿ
ಶೀತಗಟ್ಟೂ , ಜಾಣ ಹೊಡ್ದನಂತೆ ರಣ್ಣದಾ || ೧೧ ||

ಶೀತಗಟ್ಟೂ ಜಾಣ ಹೊಡ್ದನಂಬೂ ಶಮ್ಯದಲ್ಲಿ
ಹರವಾ ಶರಪಾನಾಗಿ ಹರ್ ದಳಂತೆ ಹೆಣ್ಣೂ || ೧೨ ||

ಹರ್‍ವಾ ಶರ್‍ಪಾಗೀ ಹರ್ ದಳಂಬೂ ಶಮ್ಯದಲ್ಲಿ
ಮುಂಗ್ರೀ ಮರ್ ಯಾಗೀ ಮುರ್ ದನಂತೆ ಜಾಣಾ || ೧೩ ||

ಮುಂಗ್ರೀ ಮರ್ ಯಾಗೀ ಮುರ್ ದನಂಬೂ ಶಮ್ಯದಲ್ಲಿ
ಮದ್ದಿನ ಗಿಡವಾಗೀ ನಿತ್ತಳಂತೆ ಹೆಣ್ಣೂ || ೧೪ ||

ಮದ್ದಿನ ಗಿಡವಾಗೀ ನಿತ್ತಳಂಬೂ ಶಮ್ಯದಲ್ಲಿ
ಬುಡ್ಕೇ ಕೈಹಾಕೀ ಜಾಣ ವಗ್ದನಂತೆ || ೧೫ ||

ಬುಡ್ಕೇ ಕೈಹಾಕೀ ವಗ್ದನಂಬೂ ಶಮ್ಯದಲ್ಲಿ
ಹೆಣ್ಣೀಗ ಹೆಣ್ಣಾಗೀ ನಿತ್ತಳಂತೆ ರಣ್ಣದಾ || ೧೬ ||

ಕೋಲೂ ಕೋಲಣ್ಣ ಕೋಲೇ || ರಣ್ಣದಾ
ಕೋಲೂ ಕೋಲಣ್ಣ ಕೋಲೇ
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.