ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ
ಅವನಂತೆ ತಿರುಗಣಿಯ ಗೋಳಾಟವಾಡುವ
ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ?
ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ
ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು
ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು ನಾಲಗೆ ಜೊಲ್ಲುತ್ತಿದೆ
ಎಳೆಯುತಿದೆ ಮುಗಿಲ ಸೆರಗನ್ನು
ಜಾರಿ ಬೀಳುತ್ತದೆ ನಾಚಿಕೆ ನೀರಾಗಿ
ಹಸಿದ ನೀರು ಹರಿಹರಿದು ಓಡುತಿದೆ ತಳ ಕಾಣುವನಕ
ತಳಹೊಟ್ಟೆತಗ್ಗುಗಳು ತುಂಬಿದರೂ ಒಳಕರುಳು ಕಳವಳಿಸುತ್ತವೆ
ಆಸೆ ಹೆಡೆ ಒಡೆತೆನೆಯೆತ್ತಿ ಚಾಚುತ್ತದೆ ಆಗಸಕ್ಕಾಯೆಂದು ಬಾಯಿ
ತುರೀಯ ಚುಂಬನದ ಸವಿಜೇನಿಗಾಗಿ
ಇಲ್ಲಿ ಕೆಳಗಿನೊಳಗೆ ಜೀವ ಜೀವಗಳು ಚರ್ಮಸುಲಿದು
ರಕ್ತ ಕುಡಿದು ಮಾಂಸ ನೆಣ ಕಿತ್ತು ತಿನ್ನುತ್ತಿವೆ
ಒಂದರ ಜೀವ ಇನ್ನೊಂದರ ಸಾವು
ಗಂಡು ಹೆಣ್ಣಿಗಾಗಿ ಹೆಣ್ಣು ಗಂಡಿಗಾಗಿ
ಹಸಿದು ಹಸಿವಿಂಗಿಸಲೆಂದೇ ಹಬ್ಬಿಸಿಕೊಂಡಿವೆ ಹೊಕ್ಕುಳಬಳ್ಳಿಗಳ
ತೆರೆದುಕೊಂಡಿವೆ ಬಸಿರು ಭಾವಗಳ
ಹೊಸೆಯುತ್ತಿವೆ ಒಡಲ ಹಗ್ಗಕಗ್ಗಗಳ
ಈ ಹಸಿವಿಗಿಲ್ಲ ತಿಂದು ತೇಗಿದ ತೃಪ್ತಿ
*****