ಸಂದಿಗ್ಧಗಳ ಮೀರುವತ್ತ ನಿಸಾರ್ ಕಾವ್ಯ

ಸಂದಿಗ್ಧಗಳ ಮೀರುವತ್ತ ನಿಸಾರ್ ಕಾವ್ಯ

ನಿಸಾರ್ ಅಹಮದ್ ಸಾಹಿತ್ಯವನ್ನು ಒಂದು ಭಿನ್ನ ಪ್ರವಾಹದ ಓದು ಎಂದು ಭಾವಿಸಲು ಸಜ್ಜಾಗಿ ನಿಂತ ಮನಃಸ್ಥಿತಿಯೇ ಬೆಳೆದುಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಬರೆಹಗಾರ ಮುಸ್ಲಿಂ ಎನ್ನುವುದು. ವಾಸ್ತವವಾಗಿ ಕವಿಯೊಬ್ಬ ತನ್ನದೇ ಆದ ನುಡಿಗಟ್ಟು ಮತ್ತು ಭಾವದ ಸ್ಥಾಪನೆಯನ್ನು ಮಾಡುವ ಸವಾಲನ್ನು ಎದುರಿಸುತ್ತಿರುತ್ತಾನೆ. ಆದರೆ ಜಾತಿ ಮತ್ತು ಲಿಂಗೀಯ ನಿಶ್ಚಿತತೆಗಳು ನುಡಿಗಟ್ಟನ್ನು ಸ್ಥಾಪಿಸಿಕೊಳ್ಳಬೇಕಾದ ಅರ್‍ಥವನ್ನು ಬೇರೊಂದು ರೀತಿಯಲ್ಲೂ ನಿರೂಪಿಸಬೇಕಾಗುತ್ತದೆಯಲ್ಲದೆ ಕಲ್ಪಿತ ಮುಖ್ಯವಾಹಿನಿಯ ಜೊತೆ ಸದಾ ಸಂವಾದ ಮಾಡಬೇಕಾದ, ಸಂಬಂಧದ ಸಾಮರಸ್ಯ ಕಾಪಾಡಿಕೊಳ್ಳಬೇಕಾದ ಆತಂಕವನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಈ ಸೂಕ್ಷ್ಮವನ್ನು ಎದುರಿಸುವ ಬರೆಹಗಾರ ಸೂಚ್ಯತೆಯನ್ನು ಕೈಬಿಟ್ಟು ವಾಚ್ಯತೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯೂ ಇರುತ್ತದೆ. ಕವಿಯಾಗಿ, ನಿಸಾರ್ ಈ ಸಂದಿಗ್ಧಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ. ಜೊತೆ ಜೊತೆಗೆ ಅವನ್ನು ನೀಗಿಕೊಳ್ಳುವ ದಾರಿಗಳನ್ನು ತಡಕಾಡುತ್ತಲೇ ಬಂದಿದ್ದಾರೆ.

ನಿಸಾರರ ಕಾವ್ಯ ಮುಖ್ಯವಾಗಿ ಎದುರಿಸುತ್ತಿರುವುದೇನೆಂದರೆ ರಾಷ್ಟ್ರೀಯತೆಯ ಪ್ರಶ್ನೆಯನ್ನು, ಅದರೊಂದಿಗೆ ತಳಕು ಹಾಕಿಕೊಂಡಂತೆ ಬರುವ ಅಸ್ಮಿತೆಯ ಪ್ರಶ್ನೆಯನ್ನು. ಕನ್ನಡದ ಬಹುಮುಖ್ಯ ಲೇಖಕರೆಲ್ಲ ಎದುರಿಸಿದ ರಾಷ್ಟ್ರೀಯತೆಯ ಸಂಗತಿಯನ್ನು ನಿಸಾರರು ತಮ್ಮ ಕಾವ್ಯದಲ್ಲಿ ಎದುರಿಸುತ್ತಿದ್ದಾರೆ. ಆದರೆ ಆ ರಾಷ್ಟ್ರೀಯತೆಯ ಸಂದರ್‍ಭ ಮಾತ್ರ ನಿಸಾರರಿಗೇ ವಿಶಿಷ್ಟವಾಗಿರುವಂತದ್ದು. ನವೋದಯ ಕಾಲದ ರಾಷ್ಟ್ರೀಯತೆಯು ಕಟ್ಟುವ ಆಶಯ ಮತ್ತು ಹೊಸ ಸಮಾಜವನ್ನು ಎದುರು ನೋಡುವ ತುಡಿತವನ್ನು ಅನುಭವಿಸುವ ಸಂವೇದನೆಯನ್ನು ಹೊಂದಿತ್ತೆಂದು ಸ್ಥೂಲವಾಗಿ ಗುರುತಿಸುವುದಾದರೆ, ನವ್ಯದ ಹೊತ್ತಿಗೆ ರಾಷ್ಟ್ರನಿರ್‍ಮಾಣದ ವಾಸ್ತವವು ವಸಾಹತೋತ್ತರ ಸಮಾಜದ ದುರಂತವನ್ನು ಕಾಣಿಸುತ್ತಿತ್ತು. ‘ಕಟ್ಟುವೆವು ನಾವು’ ಎಂಬ ಆಶಯದಿಂದಲೇ ಹೊರಟ ಅಡಿಗರ ಕಾವ್ಯ ಆನಂತರದಲ್ಲಿ ಎಂತಹ ತೀಕ್ಷ್ಣವಾದ ರಾಜಕೀಯ ವಿಡಂಬನೆಯನ್ನು ಅಳವಡಿಸಿಕೊಂಡಿತು ಎಂಬುದನ್ನು ಗಮನಿಸಿದರೆ ರಾಷ್ಟ್ರೀಯತೆಯ ಕುರಿತಾದ ಹೊಸ ಸಂವೇದನೆಯೊಂದು ಮೈದಾಳುತ್ತಿರುವುದು ಗೋಚರಿಸುತ್ತದೆ. ನಿಸಾರ್ ಅವರ ಕಾವ್ಯವು ರಾಷ್ಟ್ರೀಯತೆಯ ಈ ಸಂವೇದನೆಯನ್ನು ತುಸು ವೇಗವಾಗಿಯೇ ಆವಾಹಿಸಿಕೊಂಡಿದೆ. ರಾಜಕೀಯವನ್ನು ಕುರಿತಾದ ಅವರ ಕವನಗಳು ‘ಕಟ್ಟುವ’ ಕೆಲಸದ ಬಗ್ಗೆ ಹೆಚ್ಚು ಜಾಗೃತವಾಗುತ್ತಾ ವ್ಯಂಗ್ಯವನ್ನು ತನ್ನ ಸಾಧನವನ್ನಾಗಿ ಬಳಸಿಕೊಳ್ಳುತ್ತಾ ಬರುತ್ತದೆ. ನಿಸಾರರ ಜನಪ್ರಿಯ ಕವನವಾದ ‘ಕುರಿಗಳು ಸಾರ್ ಕುರಿಗಳು’ ಸಾಧಿಸುವ ಅಪ್ರತಿಮ ವ್ಯಂಗ್ಯ ಯಶಸ್ವಿಯಾಗುವುದು ಕುರಿ ಮತ್ತು ಕುರುಬರ ನಿರ್‍ದಯ ಬೇರ್‍ಪಡುವಿಕೆಯನ್ನು ಚಿತ್ರವತ್ತಾಗಿ ಸೂಚಿಸುವುದರೊಂದಿಗೆ, ಎರಡು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾದ ಸಮುದಾಯಗಳು ಶೋಷಕ-ಶೋಷಿತ ಸಂಬಂಧದ ನೆಲೆಯಲ್ಲಿ ವಿವರಿಸಲ್ಪಡಬೇಕಾದ ವಿಷಾದವನ್ನು ವ್ಯಂಗ್ಯದ ಮೂಲಕ ವಿಜೃಂಭಿಸಿ ಹೇಳುವ ಪ್ರಯತ್ನವನ್ನು ಕವಿ ಮಾಡುತ್ತಾರೆ. ವ್ಯಂಗ್ಯವನ್ನು ಒಂದು ಉದ್ದೇಶವಾಗಿ ಬಳಸುವುದು ಪ್ರಜ್ಞಾಪೂರ್‍ವಕ ಆಯ್ಕೆ ಏಕೆಂದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕಲ್ಪಿಸುತ್ತಾ ಹುಟ್ಟಿರುವಂತದ್ದು, ನಿಸಾರರಲ್ಲಿ ವ್ಯಂಗ್ಯವೊಂದೇ ಸ್ವಾಸ್ಥ್ಯವನ್ನು ಸಾಧಿಸುವ ಸಾಧನವಲ್ಲ. ವಿಷಾದ ಮತ್ತು ನೋವಿನಿಂದ ದೇಶದ ಅವನತಿಯನ್ನು ಕಾಣುವ ರೀತಿಯನ್ನೂ ಅವರಲ್ಲಿ ಕಾಣಬಹುದು. ‘ಮರುಗುವುದು ನನ್ನ ಮನ/ಸಹ ದೇಶವಾಸಿಗಳೆ, ನಿಮ್ಮ ದೈನಂದಿನ ದೈನ್ಯ ಜೀವನಕ್ರಮದ ಲಜ್ಜೆಗೆಟ್ಟ ಹಾಡಿಗಾಗಿ..’ ಎಂಬ ಸಾಲುಗಳಲ್ಲಿ ನೇರವಾಗಿಯೇ ಅವರು ವಿಷಾದವನ್ನು ದಾಖಲಿಸುತ್ತಿದ್ದಾರೆ. ವ್ಯಂಗ್ಯವನ್ನಾಗಲೀ ವಿಷಾದವನ್ನಾಗಲೀ ನಿಸಾರರು ಕೊಂಚ ನಿರ್‍ಭಿಡೆಯಿಂದ ಬಳಸುತ್ತಾರೆ. ಅವರ ಕಾವ್ಯ ‘ಮಾತು ಮಾತು ಮಾತಿನ ಕರಾಮತ್ತಿನಲ್ಲೇ ತೋಡಿಕೊಳ್ಳುವ ಗುಣ ಹೊಂದಿದೆ. ಇಂತಲ್ಲಿ ಸಾರ್‍ವಜನಿಕವಾಗಿ ತನ್ನನ್ನು ತಾನು ಒಡ್ಡಿಕೊಳ್ಳುವ ಕವಿಯಿದ್ದಾರೆ. ಈ ಸಾರ್‍ವಜನಿಕತೆ ಏಕೆಂದರೆ ಇದು ಸಾರ್‍ವತ್ರಿಕವಾದ ಸಂಗತಿಯಾಗಿದ್ದು ಅಲ್ಲಿ ಹುಟ್ಟುವ ವಿಷಾದವೂ ಸಹ ಎಲ್ಲರಿಗೂ ತಟ್ಟುವಂತದ್ದಾಗಿದೆ ಎನ್ನುವ ಭಾವ ಸೇರಿಕೊಳ್ಳುತ್ತದೆ.

ರಾಷ್ಟ್ರೀಯತೆಯನ್ನು ಅನನ್ಯವಾಗಿ ಗ್ರಹಿಸುವಲ್ಲಿ ಅಲ್ಪಸಂಖ್ಯಾತ, ದಲಿತ ಮುಂತಾದ ಅಸ್ಮಿತೆಗಳು ಕೆಲವು ತೊಡಕುಗಳನ್ನು ಕಾಣುತ್ತವೆ. ತನಗೆ ಅನ್ಯವೆನ್ನುವ ಪರಕೀಯ ಅಂಶಗಳನ್ನು ರಾಷ್ಟ್ರೀಯತೆಯು ನಿರಾಕರಿಸುತ್ತಾ ಒಂದು ಏಕತ್ವವಾದ ಅಸ್ಮಿತೆಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿರುತ್ತದೆ. ನಿಸಾರರು ರಾಷ್ಟ್ರೀಯತೆಯನ್ನು ಕಲ್ಪಿಸುವಾಗ ಅವರಲ್ಲಿ ಸ್ವಕೀಯವಾದ ಪ್ರಜ್ಞಾಪೂರ್ವಕತೆ ತನ್ನಿಂತಾನೇ ಮೂಡುತ್ತದೆ. ಇದನ್ನು ಕೊಂಚ ವಿವರಿಸುವುದಾದರೆ, ನಿಸಾರ್ ರಾಷ್ಟ್ರೀಯತೆಯನ್ನು ಎರಡು ಬಗೆಯದಾಗಿ ಕಲ್ಪಿಸುತ್ತಿದ್ದಾರೆ. ಒಂದು, ನವೋದಯದ ದೇಶಭಕ್ತಿಯನ್ನು ತುಂಬಿಕೊಂಡ ರಾಷ್ಟ್ರೀಯತೆ. ಇದರಲ್ಲಿ ಸ್ಥಳ ವಿಶೇಷ, ದೇಶಕ್ಕಿರುವ ಮಹಾನ್ ಗುಣಗಳ ಸ್ಮರಣೆ ಇತ್ಯಾದಿ ಮೇಲುಗೈಯಾಗಿರುತ್ತದೆ. ಇನ್ನೊಂದು ಬಗೆಯ ರಾಷ್ಟ್ರೀಯತೆಯಲ್ಲಿ ಅನ್ಯತೆಯನ್ನು ಧೇನಿಸುವ ಮೂಲಕ ಒಡಕುಗಳ ಬಗೆಗೆ ವಿಷಾದವನ್ನು ವ್ಯಕ್ತ ಪಡಿಸುತ್ತಿರುವಂತದ್ದು.

ನಿಸಾರ್ ಮುಸ್ಲಿಮರಾಗಿ ಹುಟ್ಟಿದ ಮಾತ್ರಕ್ಕೆ ಅವರು ಅನ್ಯತೆಯನ್ನೇ ಮುಂದು ಮಾಡುತ್ತಾರೆ ಎನ್ನುವ ಸರಳೀಕರಣಕ್ಕೆ ಬರುವುದು ಸರಿಯಾದ ಮಾರ್‍ಗವಲ್ಲ. ಪ್ರಾಯಶಃ ಅವರೂ ಮೊದಲುಗೊಂಡು ತಂತಮ್ಮ ರಾಷ್ಟ್ರೀಯತೆಯ ಉಪ ಅಂಶಗಳನ್ನು ಒಳಗೊಂಡೇ ಭಾರತವೆಂಬ, ಕನ್ನಡವೆಂಬ ರಾಷ್ಟ್ರೀಯತೆಗಳನ್ನು ಕಟ್ಟಿಕೊಳ್ಳುವ ಬಹು ಸಮುದಾಯಗಳೇ ಇವೆ. ಇಲ್ಲಿ ಪ್ರತಿಯೊಬ್ಬರೂ ಎದುರಿಸುವ ಅನ್ಯತೆಯ ಪ್ರಶ್ನೆಯು ಎಷ್ಟು ಮುಂಚಾಚಿಕೊಂಡಿದೆ ಎನ್ನುವುದಷ್ಟೇ ಮುಖ್ಯವಾದ ಸಂಗತಿ ಎನ್ನಿಸುತ್ತದೆ. ನಿಸಾರ್ ಕೂಡ ಈ ದ್ವಂದ್ವ ಹಾದಿಯ ಪಯಣಿಗರು. ತಮ್ಮ ಕಾವ್ಯದ ಹಾದಿಯಲ್ಲಿ ‘ಮಹಿಮವಂತೆ ಭಾರತಿ’, ‘ರಾಷ್ಟ್ರ ವಂದನೆ’, ‘ಕನ್ನಡಾಂಬೆಯ ಹಿರಿಮೆ’, ‘ಕನ್ನಡವೆಂದರೆ’ ಎಂಬಂತಹ ಕವಿತೆಗಳನ್ನು ಬರೆದ ಕವಿ ಅದೇ ರಾಷ್ಟ್ರೀಯತೆಗಳನ್ನು ಅಂತರಂಗದಲ್ಲಿ ಕೇಳಿಕೊಳ್ಳುವಂತಹ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’, ‘ಸವತಿ ಮಕ್ಕಳ ಹಾಗೆ’, ‘ಉಭಯ ಕಷ್ಟ’, ‘ನಾನೆಂಬ ಪರಕೀಯ’ ಎಂಬಂತಹ ಕವಿತೆಗಳನ್ನು ಬರೆಯುತ್ತಾರೆ. ಈ ದ್ವಂದ್ವವನ್ನು ಅವರು ಈ ಬಹು ಸಮುದಾಯಗಳಿಂದ ಮಾತ್ರವಲ್ಲದೆ, ತಮ್ಮದೇ ಸಮಾಜದಿಂದಲೂ ಎದುರಿಸಬೇಕಿದೆ. ಇವರು ಒಪ್ಪಿಕೊಂಡು ಬರೆಯುವ ಸಂಸ್ಕೃತಿಯನ್ನು ಅಸಹನೆಯಿಂದ ನೋಡುವ ಆ ಕಡೆಯ ಆಗ್ರಹವನ್ನೂ ಎದುರಿಸಬೇಕಾದ ಸಂಕಟಗಳು ಸಣ್ಣದನಿಯಲ್ಲಾದರೂ ವ್ಯಕ್ತವಾಗುತ್ತಿವೆ. ಈ ದೃಷ್ಟಿಯಿಂದ ಕವಿ ಪ್ರಜ್ಞಾಪೂರ್‍ವಕವಾಗಿ ಸ್ಪಂದಿಸುವುದು ಅನಿವಾರ್‍ಯವೆನಿಸಿದೆ ಎನ್ನುವ ಹಾಗೆ ನಿಸಾರ್ ಬೆರೆಯುವ ಸಾಮರಸ್ಯದ ಸಂಕಟಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ಅಂಶ ಅವರ ಕಾವ್ಯದ ಪ್ರಧಾನವಾದ ಅಭಿವ್ಯಕ್ತಿಯ ದನಿಯೂ ಆಗುವುದು ಗಮನಾರ್‍ಹವಾಗಿದೆ.

ನಿಸಾರ್ ಅವರು ತಮ್ಮ ಹಿಂದಿನ ಕಾವ್ಯಗಳ ಸಾಮರಸ್ಯದ ಅಭಿವ್ಯಕ್ತಿಯನ್ನು ಗ್ರಹಿಸುವ ನೆಲೆ ಇಲ್ಲಿ ಗಮನಿಸಬೇಕಾಗಿದೆ. ಸಾಮರಸ್ಯದ ಏಕತಾನತೆಯಿಂದಲೇ ತನ್ನ ದನಿಯನ್ನು ಸಡಿಲಗೊಳಿಸಿಕೊಂಡಿದ್ದ ಅನೇಕ ಉದಾಹರಣೆಗಳು ಅವರ ಮುಂದಿವೆ. ಹಗೆ ಮತ್ತು ವಿದ್ರೋಹಗಳಿಗೆ ಪ್ರತಿಚಿಂತನೆಯ, ಪ್ರತಿಸ್ಪಂದನದ ರೀತಿಗಳನ್ನು ನಿಸಾರ್ ಕಾವ್ಯ ತಡಕಾಡಿದೆ. ಪರಕೀಯತೆಯ ಅಂಶಗಳನ್ನು ಎದುರಿಸುವಾಗ ಅನುಭವಿಸುವ ತಳಮಳವನ್ನು ಸಾರ್‍ವತ್ರಿಕಗೊಳಿಸುವ ಭಾವವನ್ನು ಅವರ ಕವಿತೆಗಳು ಕಾಣಿಸುತ್ತಲೇ ಬದಲಿ ಚೇತನಗಳ, ತತ್ವಗಳ ಕಡೆ ತಿರುಗುತ್ತವೆ. ಅಂದರೆ ಇಡಿಯಾದುದರಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡಾಗ ಮಾತ್ರವೇ ಮಹತ್ತಾದುದನ್ನು ಹೊಂದಲು ಸಾಧ್ಯ ಎಂಬ ಭಾವ. ನಿಸಾರ್ ಕಾವ್ಯದ ತುಂಬ ಅನ್ಯದ ವಿವೇಚನೆ ಮಾತ್ರವೇ ಇಲ್ಲ ಎಂದು ಈ ಮೊದಲು ಹೇಳಿದ್ದು ಇದೇ ಕಾರಣಕ್ಕೆ. ನಿಸಾರ್‌ ಮುಖ್ಯವಾಗಿ ಅನುಸಂಧಾನ ಮಾಡುವ ವ್ಯಕ್ತಿಗಳು ಮತ್ತು ತತ್ವಗಳನ್ನು ನೋಡಿದರೆ ಅವು ವಿಶಾಲವಾದ ಭಿತ್ತಿಯಲ್ಲಿ ಜೀವನ ಮೌಲ್ಯಗಳನ್ನು ಹುಡುಕುತ್ತಿವೆ ಎನ್ನಿಸುತ್ತವೆ. ಮಾಸ್ತಿ, ಪರಮಹಂಸ, ಶಾರದಾದೇವಿ, ಪುರಂದರದಾಸ, ಏಸುಕ್ರಿಸ್ತ ಮುಂತಾದ ವ್ಯಕ್ತಿಚಿತ್ರಗಳ ಮೂಲಕ ಅವರು ಶೋಧಿಸುವ ಮೌಲ್ಯಗಳು ಸಾಮರಸ್ಯದ ಬಂಧವನ್ನು ಪ್ರಸ್ತುತ ಪಡಿಸುವ ರೀತಿಯವಲ್ಲ ಎಂಬುದು ಅವರ ಕಾವ್ಯದ ಓದುಗರಿಗೆ ತಿಳಿಯಲಾರದ ಸಂಗತಿಯಲ್ಲ. ಸಾಮರಸ್ಯದ ಆಶಯಗಳೇ ಪ್ರಧಾನವಾದ ಕಾವ್ಯ ಹಾಗೂ ಸಾಮಾಜಿಕ ಕಳಕಳಿಯ ಕಾವ್ಯ ಈ ಎರಡೂ ಅವರಲ್ಲಿ ಬೆರೆತು ತಮ್ಮದೇ ಆದ ಹದ ಕಂಡುಕೊಂಡಂತಿವೆ.

ನಿಸಾರರ ಕಾವ್ಯವು ತನ್ನೊಳಗೆ ಮೂಲಭೂತವಾದ ವಿಕಾಸದ ತತ್ವವನ್ನು ಪೋಷಿಸುತ್ತದೆ. ಕನ್ನಡ ಕಾವ್ಯ ಅರವಿಂದರ ಪ್ರಭಾವದಲ್ಲಿ ಕಂಡುಕೊಂಡ ವಿಕಾಸದ ಮಾರ್‍ಗವೇನಿದೆ ಅದರ ಇನ್ನೊಂದು ಟಿಸಿಲಾಗಿ ನಿಸಾರ್ ಅವರ ತತ್ವ ಬೆಳೆಯುತ್ತದೆ. ಅವರ ಮುಖ್ಯ ತತ್ವವು ಕಾಣಿಸುವುದು ಬೀಜ ಮರದ ರೂಪಕದಲ್ಲಿ. ನಿಸಾರ್ ಸಾಮಾಜಿಕವಾದ ರಚನೆಗಳಾದ ಮುಸ್ಲಿಂ, ಹಿಂದೂ ಎಂಬ ವಿಭಾಗಗಳ ಮೇಲೆ ನಿಂತು ಮಾತನಾಡುವುದಕ್ಕಿಂತಲೂ ತಮ್ಮ ಕವಿತೆಯ ಸಾಧ್ಯತೆಯನ್ನು ವ್ಯಕ್ತಿಯ ವಿಕಾಸದ, ಅವನಲ್ಲಿ ಅಡಗಿರುಬಹುದಾದ ಅಪರಿಮಿತ ಶಕ್ತಿಯಲ್ಲಿ ಕಂಡುಕೊಳ್ಳಲು ಬಯಸುತ್ತಾರೆ. ಛೇದಗಳಲ್ಲಿ, ನಿಶ್ಚಿತತೆಗಳಲ್ಲಿ ಇರುವ ವಿಷಾದದ ಎಳೆಯನ್ನು ಬಳಸಿಕೊಳ್ಳುತ್ತಲೇ ಅವನ್ನು ವಿಕಾಸದ ತೊಡಕುಗಳಾಗಿರುವುದರತ್ತ ಗಮನ ಹರಿಸುತ್ತಾರೆ. ಈ ಹೊರಳನ್ನು ನಿಸಾರ್ ಅವರ ಕಾವ್ಯದಲ್ಲಿ ಗಮನಿಸದಿದ್ದರೆ, ಅದು ಒಂದು ‘ಘೆಟೊ’ ಕಾವ್ಯವಾಗಿ ಬಿಡುತ್ತದೆ.

ಎಷ್ಟೋ ಬಾರಿ ನಿಸಾರರನ್ನು ಅಲ್ಪಸಂಖ್ಯಾತ ಕವಿಯೆಂದೂ ಮತ್ತೊಮ್ಮೆ ಸಾಮರಸ್ಯದ ಕವಿಯೆಂದೂ ಕರೆಯುವುದರಲ್ಲಿ ಅವರ ಕಾವ್ಯದ ಒಂದು ಅಂಶವನ್ನು ಮಾತ್ರವೇ ನೋಡಲಾಗುತ್ತದೆ. ಈ ಅಂಶವನ್ನು ಬದಿಗಿಟ್ಟೇ ಅವರ ಕಾವ್ಯವನ್ನು ನೋಡಬೇಕಾಗಿದೆ. ಪ್ರಕೃತಿ ಮತ್ತು ಮನುಷ್ಯ, ಆತ್ಮಿಕ ಸಂಬಂಧಗಳು, ಮತ್ತು ವಿಕಾಸಶೀಲತೆಯನ್ನು ಒಟ್ಟು ಮಾಡಿದ ಕಾವ್ಯ ಅವರದು. ಅದರಲ್ಲಿ ಮುಸ್ಲಿಂ ಸಂವೇದನೆಯೂ ಒಂದು ಭಾಗವಷ್ಟೆ. ಹೀಗೆಂದ ಮಾತ್ರಕ್ಕೆ ನಿಸಾರ್ ಕಾವ್ಯ ದ್ವಂದ್ವಾತೀತ, ಪ್ರಶ್ನಾತೀತ ಎಂದೇನೂ ಅಲ್ಲ. ನಿಸಾರ್ ಅವರಲ್ಲಿ ನಾಜೂಕಾದ ಸಂಸ್ಕೃತಿಯ ಹೊದಿಕೆ ಇದೆ (ಅದು ಅವರು ಯಾವಾಗಲೂ ಧರಿಸುವ ಸೂಟಿನಂತೆ). ಅವರ ಕಾವ್ಯವು ಒಂದು ಬಗೆಯ ಶಿಷ್ಟತೆಯನ್ನು ಸದಾ ಹಿಡಿದಿರುತ್ತದೆ. ಅವರು ತಮ್ಮ ಕಾವ್ಯವನ್ನು ಸ್ಫೂರ್ತಿಯದೆಂದು ನೋಡುವುದಕ್ಕಿಂತ ಹೆಚ್ಚಾಗಿ ಅದನ್ನು ಜವಾಬ್ದಾರಿಯುತ ವಿಕಾಸದ ಮಾರ್‍ಗವನ್ನಾಗಿ ನೋಡುವುದಕ್ಕೇ ಹೆಚ್ಚು ಇಷ್ಟ ಪಡುವಂತೆ ಕಾಣುತ್ತಾರೆ. ಅವರೇ ಹೇಳಿಕೊಂಡಂತೆ, ‘ನನ್ನ ಯಾವುದೇ ಬರವಣಿಗೆ, ಪದವಿಟ್ಟಳುಪದೊಂದು ಅಗ್ಗಳಿಕೆಯ ಮಾದರಿಯದಲ್ಲ; ತಿದ್ದಾಣಿಕೆ, ದುರಸ್ತಿಯ ರೀತಿಯದು’(ನನ್ನ ಆಯ್ಕೆ ನನ್ನ ಬರಹ, ಪು.೨೫) ಇದು ಕಾವ್ಯದ ಸರಿಯಾದ ದಾರಿಯೇ. ಆದರೂ ಕವಿಯ ಪ್ಯಾಶನ್ ಹಲವಾರು ಬಾರಿ ಇಲ್ಲಿ ಹಿಂದೆ ಸರಿದು ಬಿಡುತ್ತದೆ. ಇದರಾಚೆಗೆ ನಿಸಾರ್ ಸಂಸ್ಕೃತಿಯೆಂದು ಭಾವಿಸುವ ಅಂಶಗಳನ್ನು ಶಿಷ್ಟತೆಯಲ್ಲಿಯೇ ಮಂಡಿಸುತ್ತಾರೆ. ಹೀಗಾಗಿ ನಿಸಾರರ ಕಾವ್ಯ ಒಂದು ರುಚಿಯನ್ನು ಕಾಯ್ದುಕೊಂಡೇ ನಿಲ್ಲುವಂತೆ ಭಾಸವಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡಕ್ಕ್ ತರಪ್ಣ
Next post ನಾನೆ ಪಾರ್‍ವತಿ ನಾನೆ ಗಿರಿಜೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…