ಬನ್ನಿ ಗಿಳಿಗಳ ಚಲುವ ಹೂಗಳೆ
ಚಂದ ಲೋಕವ ಕಟ್ಟುವಾ
ಚಿನ್ನ ಲೋಕವ ಚಲುವ ಲೋಕವ
ಜೀವಲೋಕವ ನಗಿಸುವಾ

ಸಾಕು ಕಲಿಯುಗ ಸಾಕು ಕೊಲೆಯುಗ
ಯಾಕೆ ಚಿಂತೆಯ ಸಂತೆಯು
ಸಾಕು ಗೂಳಿಯ ಹಳೆಯ ಕಾಳಗ
ಅಕೋ ಅರಳಿದೆ ಶಾಂತಿಯು

ಮೌನಧಾಮಕೆ ಪ್ರೇಮಧಾಮಕೆ
ಏಳಿರೇಳಿರಿ ಯಾತ್ರೆಗೆ
ಕಳ್ಳಿಕಂಟಿ ಮುಳ್ಳು ಕೀಳಿರಿ
ಮುಂದೆ ಸಾಗಿರಿ ಜಾತ್ರೆಗೆ

ಕಲಿಯ ರಾವಣ ಕೊಲೆಯು ನಿಲ್ಲಲಿ
ಪ್ರೇಮ ಅಮೃತ ಸುರಿಯಲಿ
ತಾಯಿ ಪಾರ್‍ವತಿ ಗಾನ ಸರಸತಿ
ಗೌರಿ ಗಂಗೆಯು ಹಾಡಲಿ
*****