ಅಂತರಾತ್ಮದ ದೀಪ ಎತ್ತುವೆ
ಕಣ್ಣು ಕರ್‍ಪುರ ಬೆಳಗುವೆ
ಜ್ಞಾನ ಕೆಂಡಕೆ ದೇಹ ಗುಗ್ಗುಳ
ಸುಟ್ಟು ಧೂಪವ ಹಾಕುವೆ

ಉಸಿರು ಉಸಿರಿಗೆ ಶಿವನ ನೆನಪಿನ
ಊದಬತ್ತಿಯ ಬೆಳಗುವೆ
ವಿಮಲ ಮಾನಸ ಜ್ಞಾನ ಅಗ್ನಿಯ
ತುಪ್ಪದಾರತಿ ಸಲಿಸುವೆ

ಮಾತು ಮಲ್ಲಿಗಿಯಾಗಿ ಸುರಿಯುವೆ
ಹೃದಯ ಕಮಲವ ತೆರೆಯುವೆ
ಜಾಜಿ ಕಣಗಿಲ ಬಕುಲ ಸಂಪಿಗಿ
ಗುಣದ ಮಾಲೆಯ ಹೆಣೆಯುವೆ

ಸೂರ್‍ಯ ಆರತಿ ತಟ್ಟೆ ಮಾಡುವೆ
ಕಳಶಗಿಂಡಿ ಆಗುವೆ
ಚಂದ್ರ ಬಿಸಿಬಿಸಿ ರೊಟ್ಟಿ ಮಾಡುವೆ
ಶಿವಸಮರ್‍ಪಣೆ ಎನ್ನುವೆ

ಪ್ರೀತಿ ಪಾಯಸ ನೀತಿ ಸಂಡಿಗೆ
ನಾನೆ ದಕ್ಷಿಣೆಯಾಗುವೆ
ನನ್ನ ಜೀವನ ಸುಪ್ರದಕ್ಷಿಣೆ
ಮಂಗಳಾರತಿ ಹಾಡುವೆ
*****