(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ)
ಮಡಿಮಡಿಹಾರುವ ಗುಡಿಯಲ್ಲಿ
ತೋಪಿನ ಗುಡಿಯಲ್ಲಿ
ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ
ಮೂಲೆಯ ಹುಡಿಯಲ್ಲಿ.
ನಿಡುನೀಟು ಸರದಾರ ನಸುಕಿನೊಳಗೆ
ಸಂಜೆಯ ನಸುಕಿನೊಳಗೆ
ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ
ಬಂಗ್ಲೆಯ ಬೇಲಿಮರೆಗೆ.
ಸೆಟ್ಟರ ಹುಡುಗ ತಕ್ಕಡಿಯೆಸೆದು ಅಂಗಡಿಯಲ್ಲೆ
ತಾತನಂಗಡಿಯಲ್ಲೆ
ನಕ್ಕು ನುಡಿದು ತೆಪ್ಪಗಾದ ಸಂಗಡದಲ್ಲೆ
ನಿನ್ನ ಸಂಗಡದಲ್ಲೆ.
ಕುಕ್ಕೆ ತುಂಬ ಮಲ್ಲಿಗೆ ಹೂವ ನಿನಗೆ ತೆತ್ತು
ಮಾಲಿ ನಿನಗೆ ತೆತ್ತು
ಕಣ್ಣ ಕಣ್ಣ ತಿರುವುತಿದ್ದ ನಿನ್ನ ಸುತ್ತು
ವಹವಾ-ನಿನ್ನ ಸುತ್ತು.
ಜಾತಿಯೆಲ್ಲ ಕೂಡಿತವ್ವ ಉಸಿರಿನೊಳಗೆ
ನಿನ್ನ ಉಸಿರಿನೊಳಗೆ
ಕಾಮನಪ್ಪ ತೂರಿಬಂದ ಬಸಿರಿನೊಳಗೆ
ನಿನ್ನ ಬಸಿರಿನೊಳಗೆ
ತಲೆ ತೋಳು ತೊಡೆ ಕಾಲು ಪೂರ್ಣನಾಗಿ
ಸಂಽಪೂರ್ಣನಾಗಿ
ಬಿದ್ದಿಹನವ್ವ ಪರಮಪುರುಷ ಋಣವಾಗಿ
ನಿನ್ನ ಋಣವಾಗಿ.
ಹತೋಂ ಹತೋಂ ಧಿಮ್ಮಿತ್ತೋಂ ಧಿಮಿತತ್ತೋಂ
ಧಿಕಿಟಿ ದ್ಧಿಕಿಟಿತ್ತೋಂ.
*****