ದರ್‍ಗಾದ ಎರಡು ಘನ ಗಂಭೀರ
ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು
ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು
ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ
ಬದುಕನು ಸಾರಿ ಸಾರಿ ಹೇಳುತ್ತಿದ್ದವು.
ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ
ಅಮ್ಮಿ ಕಟ್ಟುತ್ತಿದ್ದಳು ಕಸೂತಿ ಹಾಕಿದ ಚಿತ್ತಾರದ
ರಂಗುರಂಗಿನ ಬಾಗಿಲ ಪರದೆಗಳು.
ಅದಕ್ಕೆ ಇಳಿಬಿಟ್ಟ ಬಣ್ಣ ಬಣ್ಣದ ಕುಚ್ಚುಗಳು
ನಾನೂ ಕ್ರೋಶಾದಲಿ ಹೆಣೆಯುವಾಸೆ
ಬಣ್ಣ ಬಣ್ಣದ ದಾರಗಳ ಚಿತ್ತಾಕರ್‍ಷಕ ಪರದೆ
ನನಗೇನು ಗೊತ್ತಿತ್ತು ಮುಂದೊಂದು ದಿನ
ಈ ಪರದೆಯೇ ನನ್ನ ಮುಖಕ್ಕೆ
ಮರೆ ಮಾಡುವ ನಖಾಬ್ ಆಗುತ್ತದೆ ಎಂದು?
ಮೊದಲ ಬಾರಿ ಈ ಹಿಜಾಬು ಧರಿಸಿದಾಗ
ಶಕೆಯಿಂದ ಸಿಡಿಮಿಡಿಗೊಂಡು ತಲೆ ಸುತ್ತು ಬಂದು
ನನಗರಿವಿಲ್ಲದಂತೆಯೇ ಕಿತ್ತು ಬಿಸಾಕಿದ್ದೆ.
ಬುದ್ಧಿ ಹೇಳಿದ ಬಂಧು ಬಾಂಧವರು
ಇದು ನಮ್ಮ ಧರ್‍ಮದ ಪವಿತ್ರ ಉಡುಪು
ಬಿಡುವುದು ಅಲ್ಲಾಹನಿಗೆ ಸುತಾರಾಂ ಇಷ್ಟವಿಲ್ಲ.
ಮತ್ತೆ ಪರದೆಯ ಹಿಂದೆ ದೂಡಿದರು.
ಬುರ್‍ಖಾದ ಜಾಳಿಗೆ ನನ್ನ ಕಣ್ಣನ್ನು ಮುಚ್ಚಿದಾಗ
ಇಡೀ ಲೋಕವೇ ಕಪ್ಪಾಗಿ ಕಂಡಿತ್ತು.
ಸಾಕಿದ ಬೆಕ್ಕು, ನಾಯಿಗಳಿಗೆ ನೆರೆಹೊರೆಯವರಿಗೆ,
ಶಾಲೆಯ ಸೀತೆಗೂ ನಾನು ಅಪರಿಚಿತಳಾಗಿದ್ದೆ.
ಆಗ ಸಹಚರರೆಲ್ಲ ದೂರವಾದಂತೆ ಭಾಸವಾಗಿತ್ತು.
ನನ್ನ ಜಗತ್ತಿನಲಿ ಕತ್ತಲಾವರಿಸಿದಂತಾಗಿತ್ತು.
ಪರದೆ ನನ್ನ ಸುತ್ತಲೂ ಬೇಲಿ ತನ್ನಷ್ಟಕ್ಕೇ ನಿರ್‍ಮಿಸಿತ್ತು.
ರಕ್ಷಣೆಯ ಕ್ರೂರ ಪಹರೆಯ ಗೋಡೆ
ಬೇಸಿಗೆ ಬಿಸಿಲಿಗೆ ಬೆವರಿನ ತೊಪ್ಪೆ,
ಯಮಯಾತನೆಗೆ ಉಸಿರುಗಟ್ಟುವ ಹಿಂಸೆ.
ಪಹರೆ ಗೋಡೆಗಳ ಮಧ್ಯೆ ಚಹರೆ ಮುಸುಕಿನಲಿ
ಪರದೆ ಹೊದ್ದು ಮಾಂಸದ ಮುದ್ದೆಯಾಗಿದ್ದೆ.
ಜೀವಪೋಷಕ ಧಾತುವಿನ ಸತುವು ನಾನು
ಪೋಷಿಸಬಲ್ಲೆ ಲೋಕವನ್ನು ಸಾಯಿಸಲಾರೆ.
ಜೀವನದಿಯಾಗಿ ಹರಿದು ತಪ್ತ ಆತ್ಮಗಳಿಗೆ
ತಂಪನ್ನೆರೆದು ಅಮೃತ ಸಿಂಚನಗೈದಳು
ಶತಮಾನಗಳಿಂದ ಕಾದು ಕೆಂಪಾದ ಧರೆಗೆ
ಮಳೆಯ ಸಿಂಚನವಾಗಿ ತಣ್ಣಗಾಗಿಸಿದವಳು.
ನನಗೆ ಗೊತ್ತಿದೆ ಬದುಕುವುದು ಹೇಗೆಂದು
ನಿರ್‍ಬಂಧಗಳ ಸರಹದ್ದು ಮೀರುವುದು ಹೇಗೆಂದು.
*****