‘ನಮ್ಮ ಸೊಡರನುರಿಸುವಿರೇಂ
ಮಿಣುಕಲಿಂತು ಬರಿಯೆ?
ಪರರ ಬೆಳಕನಳುಪುವಿರೇಂ?
ಸುಡದೆ ನಿಮ್ಮ ಗರಿಯೆ?’-
ಜಂಕಿಸಿತಿಂತುಡು ಸಂಕುಳ
ಹೊಂಚುವ ಮಿಂಚುಹುಳಂಗಳ
ಬೇಸಗೆ ಕೊನೆವರಿಯೆ. ೭

‘ಕುರುಡಾದಿರೆ ಬೆಳಕಿನಿಂದ?
ನಿಮ್ಮ ಬೆಳಕಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಬೆಳಕಿಗಿಲ್ಲ.
ಪರರ ಬೆಳಕು ತನಗೆ ಸಲ್ಲ-
ಬೆಳಕು ಸಫಲವೆಲ್ಲ’ ೧೪

‘ಹಾಡುವಿರೇನೆಮ್ಮ ಹಾಡ
ಕಿರಿಚಲಿಂತು ಬರಿಯೆ?
ಹಿರಿಯ ಮರುಳು ಕೊಳದೆ ಸೇಡ
ಕಿರಿಯ ಗರಿಯ ಬಿರಿಯೆ?’-
ಜರೆದುದಿಂತು ತೆರೆಯ ದಳಂ
ಪಲ್ಲನಿಸುವ ಝಿಲ್ಲಿಗಳಂ
ಮೊದಲ ಮುಗಿಲ್ಗರೆಯೆ. ೨೧

‘ಕಿವುಡಾದಿರೆ ಹಾಡಿನಿಂದ?
ನಿಮ್ಮ ಹಾಡಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಹಾಡಿಗಿಲ್ಲ,
ಪರರ ಹಾಡು ತನಗೆ ಸಲ್ಲ-
ಹಾಡು ಸಫಲವೆಲ್ಲ. ೨೮

ಮಿಂಚಿನ ಮರಿ ಮುಂಚಿ ಮೆರಸೆ
ಹೃದಯ ಶಿಖೆಯ ಹೊನ್ನ,
ಗುಡುಗಿನ ಮಗು ಮುಡುಗಿ ಮೊರಸೆ
ಕಿನ್ನರಿಗರಿಯನ್ನ,
ಹತ್ತೆ ಹತ್ತೆಯುರುಳೆ ಮೊಳಗು,
ಸುತ್ತು ಸುತ್ತು ಕುರುಳೆ ತೊಳಗು,
ಬೆಳೆಯಿತು ಮಳೆ ಮುನ್ನ ೩೫

೧ಆಟಿಯ ನಟ್ಟಿರುಳೊಳಂದು
ಬೀಸುವ ಮಳೆಯಲ್ಲಿ,
ಬಾನವೆ ತಾನೊಂಟಿಯೆಂದು
ನೆಡಗುವಡಗುವಲ್ಲಿ;
ತೂಕಡಿಸುವ ಬೆಟ್ಟದಲ್ಲಿ,
ಆಕಳಿಸುವ ತೊಟ್ಟಿಯಲ್ಲಿ,
ಮೇಕೆದಾರಿಯಲ್ಲಿ, ೪೨

ಪಥಿಕನೊಬ್ಬನೂರಿ ಮುಟ್ಟೆ
ಮುಟ್ಟೆ ಮೆಟ್ಟಿ ನಡೆಯೆ,
ಎದೆಯ ಬೆಪ್ಪು ಕಿವಿಯ ತಟ್ಟೆ,
ಜತೆಯ ನೆರಳೆ ಕೆಡೆಯೆ-
ಮಿರ್ರನೊಂದು ತಾರೆಯಿಲ್ಲ,
ಭೋರೆಂಬ ತರಂಗವಿಲ್ಲ
ಉಸುರಿಗೆ ಸಿಡಿಮಿಡಿಯೆ; ೪೯

ಮಿಂಚುಹುಳವ ಕಂಡನೆಂತು,
ಝಿಲ್ಲಿಯ ಗಾನವಂ
ಕೇಳ್ದನೆಂತು, ಮೂಡಿತಂತು
ಕಂತಿದೆಳವೆ ನವಂ-
ಕಂಗೆ ಸುಳಿಯಲೆಳೆಯ ಸೊಂಪು,
ಕಿವಿಗೆ ನುಸುಳೆ ಹಸುಳೆಯಿಂಪು,
ಪಧವ ಹಿಡಿದನವಂ ೫೬
*****
೧ ಆಷಾಢಮಾಸ