(ಹಾಡು)

ಗಿಳಿಬಾಗಿಲ ತೆರೆಯೆಯಾ? ಹೂ
ದನಿಯಿನೆನ್ನ ಕರೆಯೆಯಾ?
ಬದಲು ಬಿದುವ ತೋರೆಯಾ? ತಾ
ರಾಕಟಾಕ್ಷ ಬೀರೆಯಾ? ೪

ಹಣತೆಹುಳವ ನಂದಿಸಿ, ಬಾ
ವಲಿಯ ತಕ್ಕಡಿಯೊಂದಿಸಿ,
ಇರುಳ ಮಳಿಗೆ ಮುಗಿಯಿತು, ನೈ
ದಿಲೆಯ ಬೀಗ ಬಿಗಿಯಿತು. ೮

ಪಡುಹಾಸಂಗಿಯೆಡೆಯಲಂ
ಗಾತ ಬಿದ್ದ ಕವಡೆಯ
ಬಗೆವಳೆ ಉಷೆ ದಾಯಮಂ
ನಿನಗುಲಿಸಲೆಲರ ಗೇಯಮಂ? ೧೨

ನಿನಗೆ ತೆತ್ತು ನೆನಸನು, ನಿ
ನ್ನಿಂದ ಕೊಳಲು ಕನಸನು,
ನಿನ್ನ ಕಣ್ಣ ಸಂತೆಗೆ ರವಿ
ಬಂದನಿದೊ ಕದಂ ತೆಗೆ! ೧೬

ನಲಿನಿಯ ನನೆಮುನಿಸಿನ, ಕೋ
ಗಿಲೆಯ ಕೊರಳ ಕನಸಿನ,
ಮುಗಿಲಿನ ೧ಮಿರುವರಿಕೆಯ ಸ
ಲ್ಲುತಿದೆ ನೋಡ ಹರಕೆಯ! ೨೦

೨ಪತಂಗದಂಚೆಗರಿಯಲಿ, ವಿ
ಹಂಗದೆಲರ ತರಿಯಲಿ,
ಅಲರ ಪರಿಸೆಯಲಿ ನಿನ್ನ ನಾ
ಪಾರ್‍ವೆನೊಸಗೆಯನುದಿನ! ೨೪

ನೆನವ ಮೊಗ್ಗೆಯಲಿ ನಿನ್ನ
೩ಸೂವರಿಪಾಸೆಯನೆನ್ನ
ಸೆರೆಬಿಡಿಸೆಯ ನೆಟ್ಟಗೆನ್ನ
ಕಾವ ಕಣ್ಣಿನ ೪ಹುಟ್ಟಿಗೆ ? ೨೮

ಎದುರು ಕನ್ನಡಿಯಿಲ್ಲದೆ
ಕಣ್ಣು ಕಣ್ಣನು ಬಲ್ಲುದೆ?
ಹೆರದೆ ಬಸಿರ ಮಗುವನು ತಾ
ಯರಿಯಳದರ ಮೊಗವನು! ೩೨

ಕಣ್ಣ ನಗೆಯ ಸೆಲೆಯೊಲು, ಬಿರಿ
ವೂಗಳ ೫ಕಾದಲೆಯೊಲು,
ಉಲಿಸಾಲದ ಬಾಸೆಯಂ ಕೇ
ಳಿಸಿ ತುಂಬೆನ್ನಾಸೆಯಂ! ೩೬

ಬದುಕು ಗಾಳಿಪಟವೆನ್ನ ಮುಂ
೬ಬೆಳೆಯದೆಳೆಯನೆಳೆವನ್ನ,
ಕಡಿಯೆ-ಕತ್ತಲ ಕಾಡಿಗೊ? ನೀ
ನಿರುವ ನೇಸರ ನಾಡಿಗೊ? ೪೦
*****
೧ ಮಿರ್ರನೆ ಓಡುವಿಕೆ
೨ ಅಂಚೆ=ಟಪ್ಪಾಲು
೩ ಸೂ ಎಂದು ಮೊರೆವ
೪ ಜೇನ ಹುಟ್ಟಿ
೫ ಕಾದಲ್ಮೆ
೬ ಯೆಳೆ=ನೂಲು