ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ
ಸ್ವರ್‍ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ,
ನಡುಹಗಲು ಕಾರಿರುಳು ಸಂಜೆ ಬೆಳಕುಗಳ
ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ,
ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ;
ನಾ ಬಡವ, ಬರಿ ಕನಸು ಬಳಿಯಿರುವುದೆಲ್ಲ;
ಕನಸುಗಳನೇ ಹಾಸಿ ಬಿಡುವೆ ಕಾಲಡಿಗೆ.
ಮೆಲ್ಲಗಡಿಯಿತು ನೀನು ನಡೆವಾಗ ಒಲವೆ,
ನನ್ನ ಕನಸಿನ ಮೇಲೆಯೇ ನಡೆಯುತಿರುವೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್