ಒಂದಂಬು ತಿಂಗಳಿಗಿ ಒಂದೇನ ಬಯಸ್ಯಾಳ|
ಅಂಗೈಯಲುಪ್ಪಾ ಎಳೆಹುಣಸಿ ||೧||

ಎರಡಂಬು ತಿಂಗಳಿಗಿ ಎರಡೇನ ಬಯಸ್ಯಾಳ|
ಎರಡೆಲಿಗೊಂಡ ಎಳಿಮಾವ ||೨||

ಮೂರಂಬು ತಿಂಗಳಿಗಿ ಮೂರೇನ ಬಯಸ್ಯಾಳ|
ಮೂಡಽಲ ದಿಕ್ಕಿಽನ ಮಗಿಮಾವ ||೩||

ನಾಕಂಬು ತಿಂಗಳಿಗಿ ನಾಕೇನ ಬಯಸ್ಯಾಳ|
ಕೊಯ್ದ ಹಣ್ಣು ಕೈತುಂಬಾ ||೪||

ಐದಂಬು ತಿಂಗಳಿಗಿ ಐದೇನ ಬಯಸ್ಯಾಳ|
ಕೊಯ್ದ ಮಲ್ಲೀಗಿ ನನಿದಂಡಿ ||೫||

ಆರೆಂಬು ತಿಂಗಳಿಗಿ ಆರೇನ ಬಯಸ್ಯಾಳ|
ಆರಾಕಿದ ಬಾನ ಕೆನಿ-ಮಸರ ||೬||

ಏಳಂಬು ತಿಂಗಳಿಗಿ ಏಳೇನ ಬಯಸ್ಯಾಳ|
ಹೇಳಿ ಕಳುವ್ಯಾಳ ತವರಿಗಿ ||೭||

ಎಂಟಂಬು ತಿಂಗಳಿಗಿ ಎಂಟೇನ ಬಯಸ್ಯಾಳ|
ಕಂಟಲ್ಯಾಲಕ್ಕಿ ಕೊಡ ತುಪ್ಪ ||೮||

ಒಂಬತ್ತು ತಿಂಗಳಿಗಿ ತುಂಬ್ಯಾವ ನವಮಾಸ|
ಸಂದು ಸಂದೆಲ್ಲ ಕಿರಿಬ್ಯಾನಿ ||೯||

ವ್ಯಾಳ್ಯವ್ಯಾಳ್ಯಕ್ಕೆ ಬ್ಯಾನಿ ತಾಳ ಬಾರಿಸಿದಂಗ|
ತಾಳಲಾರೆನೆ ನಿಲ್ಲಲಾರೆನವ್ವಾ| ತಾಯವ್ವನಿರಬೇಕು ಜನ್ಮಕ ||೧೦||

ಹೊತ್ತು ಹೊತ್ತಿಲೆ ಬ್ಯಾನಿ ಕತ್ತೀಲೆ ಕಡ್ದಂತೆ|
ಹೆತ್ತವ್ವನಿರಬೇಕ ಜನ್ಮಕ ||೧೧||

ಹತ್ತಂಬು ತಿಂಗಳಿಗಿ ಹೆತ್ತಾಳ ಹಸಗೂಸ|
ಸುತ್ತೆಲ್ಲ ನೆರದಾರ ಸುಮಂಗಲೇರು ||೧೨||
*****

ಮದುವೆ ಶೋಭನಗಳ ನಂತರ ಬರುವ ವಿಧಾನದ ಹಾಡುಗಳನ್ನೆಲ್ಲ ಈ ವಿಭಾಗದಲ್ಲಿ ಕೂಡಿಸಬೇಕೆಂದು ನಮ್ಮ ಇಚ್ಛೆ. ಹೆಣ್ಣುಮಕ್ಕಳು ಚೊಚ್ಚಿಲು ಬಸಿರಾದಾಗ ಐದನೆಯ ಇಲ್ಲವೇ ಏಳನೆಯ ತಿಂಗಳಲ್ಲಿ ಒಂದು ವಿಧಾನವು ಜರುಗಿಸಲ್ಪಡುತ್ತದೆ. ಮತ್ತು ಹಡೆದಾಗ ಕೂಸಿಗೆ ನಾಮಕರಣ ಮಾಡುವ ಕಾಲಕ್ಕೆ ಇನ್ನೊಂದು ವಿಧಾನವು ಜರುಗಿಸಲ್ಪಡುತ್ತದೆ. ಬಹುಶಃ ಇಲ್ಲಿಗೆ
ವಿಧಾನಗಳೆಲ್ಲ ಮುಗಿದಂತಾಗುವವು.

ಕುಬಸಾ ಮಾಡೂ ಹಾಡು

ಚೊಚ್ಚಿಲ ಬಸುರಿಗೆ ಐದನೆಯ ಇಲ್ಲವೆ ಏಳನೆಯ ತಿಂಗಳಲ್ಲಿ ಅಕ್ಕರತೆಯಿಂದ ಕುಪ್ಪಸದ ಉಡುಗೊರೆ ಮಾಡುತ್ತಾರೆ. ಆಗ ಹೇಳುವ ಹಾಡಿದು. ಇದರಲ್ಲಿ ಬಸುರಿಗೆ ಉಂಟಾಗುವ ಬಗೆಬಗೆಯ ಬಯಕೆಗಳು ಬಣ್ಣಿಸಲ್ಪಟ್ಟಿವೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ನೆನೆದಂಡಿ=ಮೊಗ್ಗೆಗಳ ದಂಡೆ. ಆರಾಕು=ಆರಲಿಕ್ಕೆ ಹಾಕು. ಕಂಟಲಿ ಎತ್ತು=ಮುಟ್ಟುಹಾಕಿದ ಎತ್ತು.