ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ-
ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ
ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ
ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ
ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ
ಕೂಗಿ ಕರೆಯುತ್ತ ಕಣ್ಣೆದುರೆ ನೆಗೆನೆಗೆಯುತ್ತ
ಓಡಿರುವ ಕೋಳಿ ತಾಯಿಯ ಗಮನ, ಗುರಿ. ಹಿಂದೆ
ಚೀರುತಿದ್ದರು ಮಗು ಕಿವಿಯಿಲ್ಲ ಅದರತ್ತ.
ಹೊರಟಿರುವೆ ನೀನು ಸಹ ಯಾವುದನೊ ಬೆನ್ನಟ್ಟಿ,
ನಿನ್ನ ಮಗು ನಾ ಓಡಿ ಬರುತಿರುವೆ ದೂರದಲಿ ;
ಬಯಕೆ ಫಲಿಸಿತೊ ಮರಳಿ ಹರಿಸು ಈ ಕಡೆ ದಿಟ್ಟಿ,
ಮುದ್ದುಗರೆ, ರಮಿಸು, ತೋರಿಸು ಕರುಣೆ ತಾಯಾಗಿ.
ಹಿಂತಿರುಗಿ ನನ್ನ ಚೀರುಲಿಯ ನಿಲ್ಲಿಸು ನೀನು,
ನಿನ್ನವನು ನಿನಗೆ ಸಿಗಲೆಂದು ಬೇಡುವೆ ನಾನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 143
Lo, as a careful housewife runs to catch