ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ
ವಿವರಿಸಲು ಕೇಳದಿರು, ಕಣ್ಣಿಂದ ಇರಿಯದಿರು;
ಬಳಸು ಕಟುಮಾತನ್ನು, ನೇರ ಶಕ್ತಿಗಳನ್ನು;
ಬೇಡ ನಯವಂಚನೆ, ಮರೆಮಾಚಿ ಕೊಲ್ಲದಿರು,
ಬೇರೆ ಕಡೆ ಕೊಟ್ಟೆ ಎದೆಯನ್ನು ಎಂದು ಮುಖಕ್ಕೇ
ಬಾಯ್ಬಿಟ್ಟು ಹೇಳು. ಅದು ಬಿಟ್ಟು ನನ್ನೆದುರಿಗೇ
ಅತ್ತಕಡೆ ಕಣ್ಣನ್ನು ಹಾಯಿಸುವೆ ಏತಕ್ಕೆ?
ನಿನ್ನನೆದುರಿಸಬಲ್ಲ ಶಕ್ತಿಯೇ ಇರದವಗೆ
ವಂಚಿಸುವ ಚದುರೇಕೆ? ಕ್ಷಮಿಸಿರುವೆ ನಿನ್ನನ್ನು.
ತನ್ನ ಮೋಹಕನೋಟ ನನ್ನ ಶತ್ರುಗಳೆಂದು
ನನ್ನ ಪ್ರಿಯೆ ಬಲ್ಲಳು, ಹಾಗೆಂದೆ ಕಣ್ಣನ್ನು
ಬೇರೆ ಕಡೆ ತೂರುವಳು ಅನ್ಯರನಿರಿಯಲೆಂದು!
ಅದು ಬೇಡ, ಇನ್ನೇನು ಮುಗಿಸಿರುವೆ ನನ್ನನ್ನು
ನೇರ ನೋಡಿಯೆ ಕೊಲ್ಲು, ಪರಿಹರಿಸು ನೋವನ್ನು
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 139
Call not me to justify the wrong