`ಹುಚ್ಚು ಮನದ ಹತ್ತು ಮುಖ’ಗಳ
ದರುಶನ ಪಡೆದು
‘ಚಿಗುರಿದ ಕನಸು’ಗಳ ಜತೆಗೆ
‘ಮೂಕಜ್ಜಿಯ ಕನಸು’ಗಳ ಕಂಡು
‘ಸರಸಮ್ಮನ ಸಮಾಧಿ’ ಕಟ್ಟಿ
‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ
‘ಸಂನ್ಯಾಸಿಯ ಬದುಕು’ ಅಳೆದು
‘ಮೈಮನದ ಸುಳಿಯಲ್ಲಿ’ ಸೂಳೆಯ ಕಂಡು
‘ಚೋಮನ ದುಡಿ’ಯಲ್ಲಿ ದಲಿತರ ನೋವ ಮಿಡಿದು
‘ಜಾರುವ ದಾರಿಯಲ್ಲಿ’ ‘ಹೆತ್ತಳಾತಾಯಿ’
‘ಕುಡಿಯರ ಕೂಸು’ ಕಂಡ ‘ನಿರ್ಭಾಗ್ಯ ಜನ್ಮ’ದ ‘ಒಂಟಿದನಿ’
‘ಗೊಂಡಾರಣ್ಯ’ದಲಿ ಮೊಳಗಿಸಿ
‘ಬೆಟ್ಟದ ಜೀವ’ದ ಔದಾರ್ಯದ ಉರುಳಲ್ಲಿ’
‘ಕನ್ಯಾಬಲಿ’ಕೊಟ್ಟು ‘ನಂಬಿದವರ ನಾಕ ನರಕ’ವೆನಿಸಿ
‘ಶನೀಶ್ವರನ ನೆರಳಲ್ಲಿ ‘ಜಗದೋದ್ಧಾರನಾ’ ಆಡಿಸಿ
‘ಮುಗಿದ ಯುದ್ಧ’ದಲ್ಲಿ ದಣಿವಾರಿಸಿ
‘ಮೊಗ ಪಡೆದ ಮನ’ದಲ್ಲಿ ವಿರಮಿಸಿ
‘ಭತ್ತದ ತೊರೆ’ಯಾಗಿ, ‘ಸ್ವಪ್ನದ ಹೊಳೆ’ಯಾಗಿ
‘ಇನ್ನೊಂದೇ ದಾರಿ’ ತೋರಿ
‘ಅದೇ ಊರು ಅದೇ ಮರ’ದ ನೆರಳಲ್ಲಿ ಬದುಕಿ
‘ಆಳ ನಿರಾಳ’ದಲ್ಲಿ ‘ನಾವು ಕಟ್ಟಿದ ಸ್ವರ್ಗ’ ಕಂಡು
‘ಇದ್ದರೂ ಚಿಂತೆ’ ಎನ್ನುತ
‘ಅಳಿದ ಮೇಲೆ’ ಎಲ್ಲವೂ ನಿರಾಳವೆನುತ
‘ಮರಳಿ ಮಣ್ಣಿಗೆ’ ಸೇರಿದಿರಿ.
ನಿಮ್ಮದೇ ಮಾತಲ್ಲಿ
ಕವನ ಕಟ್ಟಿರುವೆ ನಾನು
ತಪ್ಪಿದ್ದಲ್ಲಿ ಕ್ಷಮಿಸಿ, ಸಣ್ಣವಳು ನಾನು.
*****