ಗೂಢಗುಂಜನ

(ಒಂದು ಅಣಕ)


ಬಾ, ಬಾರ ಸಾಂತಿ, ಈ ಊರ ಸಂತಿ ಯಾ-
ವಾರವೇನೊ….ಆಂತಿ !
ಯಾ ವಾರವೇನು ? ಮುಳ್ಳಾಗ ಜೇನು ತಲಿ-
ಯಾಗ ಹೇನು ಚಿಂತಿ !
ಬಡಿದೀತು ಭ್ರಾಂತಿ, ತಡಿದೀತು ತಂತಿ ಈ
ಪೊಡವಿ ಗುಂತಗುಂತಿ !
ಆಡುವದು ಸಾಕ, ಹಾಡೊಂದ ಬೇಕ, ಮಿಡಿ-
ಮಿಡಿಯ ಕರಳ ತಂತಿ !


ಹಾಸ್ಯಾವ ಕುಂಬಳದ ಬಳ್ಳಿ, ನಿಂದು ಬಲು ತಳ್ಳಿ
ಹಚ್ಚ ಬ್ಯಾಡ ಕೊಳ್ಳಿ –
ಕುಂಬಳದ ಕಾಯಿ ಹುಂಬರಿಗು ತಾಯಿ ಹಂ-
ಬಲಿಸಬ್ಯಾಡ ಮಳ್ಳೀ !
ನೀ ಮಳ್ಳಿ ತಿಂತಿದಿಯ ಹುಳ್ಳಿ ಹಸಿಯ ಈ-
ರುಳ್ಳಿ ಊರು ಹಳೆಹಳ್ಳಿ-
ನಿನ ಹಳ್ಳಿ ಸುತ್ತು ಬರಿ ಎಮ್ಮಿ-ಎತ್ತು, ಬೆಳ-
ದಽದ ಸಾಲುಗಳ್ಳಿ !


ಸಂದಿ ಸಂದಿ ತಿರಗತಾವ ಹಂದಿ, ಎಲ್ಲ ತುರ-
ಮಂದಿ ನಾಡಿನ್ಯಾಗ-
ತುರಮಂದಿಯೊಳಗ ತಾಯ್-ತಂದಿ ಹುಡಿಕಿದರ
ಸಿಗುವ ಬಗೀ ಹ್ಯಾಂಗ ?
ಅಂಗಡಿಯ ಮುಂದ ಗೊಂಗಡಿಯನೊಂದ ಜಂ-
ಗಮಗ ನೀಡಿ ನಿಲ್ಲಽ-
ಎಲ್ಲಾರ ಕಿವಿಗೆ ಕೇಳಿಸಲಿ ಕವಿಗೆ ಆ-
ಗಸದ ರವಿಗೆ ಸೊಲ್ಲಽ!


ಬಿದ್ದದ್ದು ಬೀಳು ಎದ್ದದ್ದು ಏಳು, ಮಿ-
ಕ್ಕಿದ್ದು ಬಾಳು ಕೇಳು !
ಬಾಳನ್ನ ಸೀಳು, ಗೋಳನ್ನ ತಾಳು; ಕಾ-
ಳನ್ನ ತೂರಲೇಳು !
ನಿನ್ನೊಡಲ ಸಿಡಿಲು ಸಿಡಿದಾತು ಕಡಲು ಕಡೆ-
ಯೆಲ್ಲಿ ಅದಕ ಹೇಳು!
ಕಡೆಯಿರದ ಕಡಲು ಸುಡಸುಡನೆ ಸುಡಲು ಮ್ಯಾಲ್
ಮೂಡಿತೊಂದು ಚೇಳು !


ಆಡಾಽಕ ನಿಂತಿ ನೀ ಪಗಡಿ ಎಲ್ಲ ತಾರಾ ತಿಗಡಿ
ಮೂಗ್ಗೆ ಬಂತು ನೆಗಡಿ-
ಮೊದಲಽನ ಇದ್ದೀದಿಯ ಸೊಗಡಿ, ಹಲ್ಲು ಬಿದ್ದ
ಬಗಡಿ ಹಾಂಗ ನಿನ್ನ ಬುಗಡಿ !
ಸವಿಯೆನಿಸಬೇಕು ಹ್ಯಾಂಗ ಕೂಳು, ತಿಂಬುದೆಲ್ಲ ಹಾಳು
ಇಲ್ಲದಕ ಸ್ವಾದಾ!
ಅಸ್ವಾದದೊಳಗ ಸುಸ್ವಾದ ಕಾಣಬೇಕಽ
ನಾದ ಕೇಳು ಪಡಿಸಾದಾ !


ಹುಲಿ ಕರಡಿ ತುಂಬಿರುವ ಮರಡಿ ನೋಡ ನೀ
ಕುರಡಿ ಕಂಗಳಿದ್ದು-
ಮರಡ್ಯಾಗ ಸಂತಿ ಸೇರೇದ ಹಂತಿ, ತಿಂ-
ದೀಯ ಪೆಟ್ಟು ಬಿದ್ದು !
ಗೋಕಾಂವಿ ಬೇಕೊ, ಬಾದಾಂವಿ ಬೇಕೊ, ಬೆಳ-
ಗಾಂವಿ ಸಂತಿ ಬೇಕೋ ?
ಗೋಕಾಂವಿ ಬೆಲ್ಲ, ಬಾದಾಂವಿ ಆಲ್ಲ, ಬೆಳ-
ಗಾಂವಿ ಬೆಳಕೆ ಬೆಳಕೋ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಗಾಲ ಬಂದೈತೆ
Next post ವಿಸಿಟ್

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…