ಕುಮಾರವ್ಯಾಸನ ವಾಣಿಯ ನುಡಿಯುವ
ವೀಣೆಯು- ಗಮಕದ ಶಾಸ್ತ್ರಜ್ಞಾನ
ಆ ಕವಿಕಾವ್ಯದ ದಿವ್ಯ ಧ್ವನಿಯಿಾ
ಕೃಷ್ಣನ ಹೃದಯದ ಗಾನದ ತಾನ-

ಕುವರವ್ಯಾಸನ ದೇಗುಲ ಕೃಷ್ಣನ
ಹಾಡುವ ಸೊಬಗಿನ ಹೃದಯ ನವೀನ
ಆ ಕವಿಯಗ್ಗಳಿಕೆಗಳಂ ಸಾಧಿಸಿ
ಶೋಧಿಸುತುಣಿಸುವ ಮಧುರಸ ಪಾನ.

ಎಲ್ಲಿದೆ ಜೀವ ಎಲ್ಲಿದೆ ಭಾವ
ಮೌನದ ಮಾತನು ಕುಣಿಸುವನಾವ-
ಸಂಗೀತದ ದನಿಯಿಂದಲಿ ಕೂಡಿಸಿ
ರಸಕಳ ತುಂಬುವ ಶಬ್ದದ ಜೀವ.

ಆ ಕವಿಯಿತ್ತನು ಮಾತಿನ ಮುತ್ತು
ಕೃಷ್ಣನ ಕೊರಳಿನ ಗಾನದ ಬಿತ್ತು
ಕೇಳುವ ಹೃದಯವ ಮಿಡಿಯುವ ಗತ್ತು
ಪಾತ್ರವನಾಡಿಪ ಪರಿಣತಿಯಿತ್ತು.

ಎಲ್ಲರನೊಂದೇ ಹೃದಯದಿ ತೋರುವ
ಸರ್ವರ ದೃಷ್ಟಿಗೆ ನೈಜವ ತರುವ
ಕೃಷ್ಣನ ಲೀಲೆಗಳೆಲ್ಲವ ತುಂಬುವ
ಭಾರತ ಚರಿತೆಯ ಹಾಡುವನಾವ.
*****