ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ
ಧೋ ಎಂದು
ಸುರಿದ ಮಳೆಗೆ
ಬೆಳಗಿಗೇ ಅರಳಿ ನಿಂತಿದೆ
ಈ ಮಳೆ ಲಿಲ್ಲಿ ಹೂವು!

ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ
ಗಿಡದ ಗರ್ಭದ
ಯಾವ ಮೂಲೆಯಲ್ಲಡಗಿತ್ತು
ಈ ಹೂವಿನ ಮಿಂಚು?

ಮಳೆಗೂ, ಈ ಮಳೆ ಲಿಲ್ಲಿಗೂ
ಯಾವ ಹೊಕ್ಕುಳು ಸಂಬಂಧವೋ?

ಮಳೆ ಹುಯ್ದಿದ್ದಕ್ಕೆ
ನೆಲದೊದ್ದೆಯೇ ಕುರುಹು.
ಹೂವರಳಿದ್ದಕ್ಕೆ
ಹೂವಿಗೆ ಹೂವೇ ಸಾಕ್ಷಿ!

ಮಳೆ ಬಿದ್ದದ್ದಕ್ಕೇ
ಹೂವರಳಿತೆನ್ನುವುದಕ್ಕೆ
ಯಾವ ಪುರಾವೆಗಳೂ ಇಲ್ಲ!

ಹೂವು ಅರಳಿದೆಯಷ್ಟೇ.
*****