ಕೂಳಿಲ್ಲದಿಹ ನನಗೆ
ಕಲ್ಲಿನಾರ್ಚನೆಯಂತೆ!
ಸೆರೆಮನೆಯ ಸೋಬತಿಗೆ
ಸೂರ್ಯ ಜಪ ತಪವಂತೆ!


ನಾನೊಲ್ಲದಿಹ ನಾರಿ
ನನಗಾಗಿ ಇಹಳಂತೆ!
ಪಿತನ ನುಡಿ ಮೀರಿ
ನಡೆಯೆ ನರಕವಂತೆ!


ಹೆಣ್ಣಿನಾ ಹಣೆಬರಹ
ಪುರುಷ ಬರೆದುದೆ ಅಂತೆ!
ಇಲ್ಲದೊಡೆ ವಿರಹ
ಅವಳ ಜೀವನಕಂತೆ!


ನನ್ನವರ ನಾನೆಂದು
ಮುಟ್ಟಕೂಡದು ಅಂತೆ!
ಹೊಲೆಯನವನೆಂದು
ಶಾಸ್ತ್ರ ಶಾಸನವಂತೆ!


ಅಪ್ಪ ಹೇಳುವುದೆಲ್ಲ
ಮೇರುಪರ್ವತವಂತೆ!
ಮೀರಿ ನಡೆವರಿಗೆಲ್ಲ
ನರಕ ಸಿದ್ದವೆ ಅಂತೆ!


ಕಾಲವರಿಯದ ಧರ್ಮ
ಕುಲಗೇಡಿ ಅಲ್ಲಂತೆ!
ಯುವಕರೆಲ್ಲರ ಧರ್ಮ
ಅವಿಚಾರವಹುದಂತೆ!
*****