ನಮನವು ನಿಮಗೆ ಕಾರಂತ
ನಿಮಗಿಂತ ಬೇರಾರಿಲ್ಲ ಧೀಮಂತ
ಕೊನೆಯವರೆಗೂ ಚುರುಕು ಶ್ರೀಮಂತ
ಸಾಕೆನಿಸಿದಾಗ ಒಮ್ಮೆಲೆ ಎಲ್ಲವೂ ಶಾಂತ.

ಮನುಷ್ಯನ ಅಳೆವುದು ಸಾವು
ಸಾಧಿಸಿ ತೋರಿದಿರಿ ನೀವು
ಇರುವಾಗ ಕಡಲ ತೀರದ ಭಾರ್ಗವ
ಮರಣದಲಿ ಯುಗಪುರುಷ!

ಬದುಕು ವೈವಿಧ್ಯಮಯ
ಬರೆದ ಹಾಳೆಗಳು ಅಗಾಧ, ವಿಶಾಲ
ಮಿತಿ ಇಲ್ಲ ಮೇರೆ ಇಲ್ಲ
ನಿಮ್ಮ ಸಾಧನೆಗೆ ಸಾಟಿಯೇ ಇಲ್ಲ.

ನಡೆಸಿದ್ದು ಸಾಂಸ್ಕೃತಿಕ ಉತ್ಖನನ
ಜೀವನ ಪರ್ಯಂತ ಪ್ರಯೋಗ
ಆಶಿಸಲಿಲ್ಲ ಪ್ರಶಸ್ತಿಗಾಗಿ
ಆದರೂ ತುಂಬಿತು ಖ್ಯಾತಿ, ಪ್ರಖ್ಯಾತಿ!

ಬಂಗಾಳಿಗೆ ಠಾಗೋರರಂತೆ ಕನ್ನಡಕ್ಕೆ ಕಾರಂತ
ಗೆಜ್ಜೆ ಕಟ್ಟಿ ಕುಣಿದದ್ದೇನು; ಜಗತ್ತೆಲ್ಲ ಅಲೆದದ್ದೇನು
ಗುಡ್ಡ ಬೆಟ್ಟವ ಹತ್ತಿ ಇಳಿದದ್ದೇನು, ಕಡಲತಡಿಯ ತುಳಿದದ್ದೇನು
ಬಾಚಿ ಬಾಚಿ ತಬ್ಬಿಕೊಂಡದ್ದು ಜ್ಞಾನ ಸಂಪತ್ತು.

ನಿಮ್ಮಾದರ್ಶಗಳು ದಾರಿದೀಪ
ಈ ನೆಲವಿರುವ ತನಕ ಸಾಹಿತ್ಯ ಲೋಕದ ಸಾಮ್ರಾಟ!
ಸಾವಲ್ಲಿ ಗಾಂಧಿಯಂತೆ ಜನರ ಎದೆಯಲ್ಲಿ
ಶೋಕ ತುಂಬಿ ಸೇರಿದಿರಿ ಮರಳಿಮಣ್ಣಿಗೆ!
*****