ಹಿತ ಅಹಿತ ಹೀಗೆ ನನಗುಂಟು ಒಲವೆರಡು,
ಪ್ರೇರಿಸುವುವೆರಡೂ ಮರುಳಂತೆ ಈಗಲೂ ;
ಎರಡರಲಿ ಒಂದು ದೇವತೆ, ಚೆಂದ, ಗಂಡು,
ಮತ್ತೊಂದು ಹೆಣ್ಣು ಕೆಟ್ಟುದು, ಬಣ್ಣ ಕಂದು.
ಕೇಡಿ ಹೆಣ್ಣೋ ನನ್ನ ನರಕಕೆಳೆಯಲು ಬಯಸಿ
ನನ್ನ ಬದಿಯಿರುವ ದೇವತೆಯನ್ನು ಸೆಳೆಯುವುದು,
ಹೊಲಸು ಬಿಂಕವ ಮರೆಸಿ, ಹುಳಿಯ ಹಾಲಿಗೆ ಬೆರಸಿ
ಸಾಧುವನು ಸೈತಾನನಾಗಿಸಲು ಎಳಸುವುದು.
ದೇವತೆಯನೂ ದೆವ್ವವಾಗಿಸುವ ಉರಿದಾಹ,
ಅನುಮಾನವಿದ್ದರೂ ಹೇಗೆ ಹೇಳಲಿ ನೇರ ?
ಇಬ್ಬರೂ ಗೊತ್ತೆನಗೆ, ನನ್ನಿಂದಲೇ ಸ್ನೇಹ,
ದೇವತೆಯು ನರಕಕ್ಕಿಳಿದಿರುವ ಸಂಭವ ಪೂರ.
ತಿಳಿಯದೆಂದೂ ಸತ್ಯ, ಶಂಕೆಯೇ ಕಡೆತನಕ,
ದೆವ್ವ ದೇವತೆಯನ್ನು ಹೊರಗೆ ತಳ್ಳುವತನಕ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 144
Two loves I have, of comfort and despair