ಕನ್ನಡದ ಸಿರಿದೇವಿ ಅನುಭಾವಿ ಮಾದೇವಿ
ಕನ್ನಡದ ದುಸ್ಥಿತಿಯ ಕಂಡು ಕಳವಳಗೊಂಡು
ಮೈಮರೆದು ಮಲಗಿರುವ ಮಹಿಳೆಯರ, ವಿಸ್ಮರಣ-
ಸಾಗರದಿ ಮುಳುಮುಳುಗಿ ತೊಳಲುತಿಹ ಪುರುಷರನ್ನು
ಎಚ್ಚರಿಸಿ ಮತ್ತೆ ಕನ್ನಡ ತಾಯ ಐಸಿರಿಯ
ಪವಣಿಸಲು ಹೊಂದಿಸಲು ತಲೆಯೆತ್ತಿ ಮೆರೆಯಿಸಲು
ಕೈಲಾಸವನು ತೊರೆದು ಶಿವಲಿಂಗದೈಕ್ಯವನು
ಮನವಾರೆ ಬಿಟ್ಟಳಿದು ಬಂದಳೆನ್ನುವ ರೀತಿ
ಶಿವಸಿದ್ಧರಾಮನೂ ತನ್ನ ತಪದೆರವಿತ್
ಬಸವಣ್ಣ ತನ್ನ ಘನಮನದ ಭಕುತಿಯನಿತ್ತ
ಪಾರ್ವತಿಯು ಕಣ್ದೆರೆದು ಬಾಯ್ತುಂಬ ಹರಸಿದಳು
ಶಿವನಿತ್ತ ತನ್ನ ಮಹ ವರದ ಹಸ್ತವನಾಗ
ಎಂಬ ರೀತಿಯೊಳೀಗ ಕನ್ನಡದ ನಾಡಿನಲಿ
ಕೀರ್ತಿಯಲಿ ಜಯದೇವಿ ಮಾತಾಯಿ ಎಸೆಯುವಳು
*****



















