ಬುಗುರಿಯ ಆಡಿಸೊ ಕಾಲ
ಬರುವದು ತಪ್ಪದೆ ಆ ಜಾಲ
ರಂಗನು ಅಪ್ಪಗೆ ದುಂಬಾಲು
ಬುಗುರಿ ನನಗೆ ಬೇಕೆನಲು

ಅಪ್ಪನು ಹೋದನು ಪೇಟೆಗೆ
ಬಣ್ಣದ ಬುಗುರಿಯ ರಂಗನಿಗೆ
ತಂದುಕೊಟ್ಟನು ಚಾಟಿ ಸಹಿತ
ದಿನದೂಡಿದ ಕನಸು ಕಾಣುತ

ಚಾಟಿಯ ಭರ ಭರ ಸುತ್ತುತ್ತ
ರಂಗನು ನಡೆದ ಮಿತ್ರರತ್ತ
ತನ್ನಯ ಬುಗುರಿ ತೋರಿಸಿದ
ತನ್ನದೇ ಮಿಗಿಲೆಂದು ವಾದಿಸಿದ

ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ
ತಿರುಗಿದಂತೆ ಕುಂಬಾರರ ತಿಗರಿ
ಗುಂಯಿಗುಡುತಲೆ ನೆಲವನು ಕೊರೆದು
ಆಡುತಲಿತ್ತು ಭೋರ್ಗರೆದು

ತಿಮ್ಮನೂ ತನ್ನಯ ಬುಗುರಿ ತಂದು
ಬಾರೋ ‘ಗಿಚ್ಚೆ’ ಆಡಲು ಬಂದ
ಆಟದಿ ತಿಮ್ಮನ ಬುಗುರಿ ಸೀಳಿತ್ತು
ರಂಗನ ಬುಗುರಿಯೂ ಹೋಳಾಯ್ತು

ಮನೆಗೆ ಮರಳಿದ ರಂಗನು ಅಳುತ
ಬುಗುರಿಯನು ತಂದೆಗೆ ತೋರಿಸುತ
ರಂಗನ ಅಪ್ಪನು ರಮಿಸಿದನು
ಮತ್ತೊಂದ ಕೊಡಿಸಲು ಒಪ್ಪಿದನು

ಮರುದಿನ ರಂಗನ ಅಪ್ಪನು
ತಂದನು ಮರದ ತುಂಡನ್ನು
ಕೊಡಲಿಯಿಂದಲೆ ಕೆತ್ತಿದನು
ಹೊಡೆದನು ಚೂಪಿದ್ದ ಮೊಳೆಯನು

ಗಟ್ಟಿ ಮರದ ಬುಗುರಿ ಹಿಡಿದು
ತಿಮ್ಮನ ರಂಗ ಕೂಗಿ ಕರೆದಿದ್ದ
ಆಟದಿ ತಿಮ್ಮನ ಪೇಟೆ ಬುಗುರಿ
ಹೋಳಾಗಿ ಬಿತ್ತು ಮೇಲೆಗರಿ

ಮನೆಗೆ ಬಂದಾ ರಂಗನು
ಬೀಗುತ ವಿಷಯ ಹೇಳಿದನು
ಗೆಲುವಿನ ಸಂತೋಷದಿ ಅವನು
ಮಲಗಿ ಗೊರಕೆಯ ಹೊಡೆದನು
*****