ಮೆಂಟಲ್ ಪೇಷಂಟ್ ಹುಸೇನಜ್ಜನ ಹೈಲಾಟ ಭಾಳಾತೇಳ್ರಿ

ಎಂ.ಎಫ್. ಹುಸೇನ್ ಎಂಬ ಖ್ಯಾತ ಚಿತ್ರಕಾರನ ಇನ್ಶಿಯಲ್ಲೇ ಆತನ ಜಾತಕ ಹೇಳಿಬಿಡುತ್ತೆ ನೋಡ್ರಲಾ. ಎಂ ಯಾನೆ ಮೆಂಟಲ್, ಎಫ್ ಯಾನೆ ಫೀವರ್. ಮೆಂಟಲ್ ಫೀವರ್ಗೆ ತುತ್ತಾಗಿರೋ ಹುಸೇನಜ್ಜಂಗೆ ಬೆತ್ಲೆ ಚಿತ್ರ ಬಿಡಿಸೋ ಗೀಳು ಭಾಳ ಕಣ್ರಿ. ಅಗ್ದಿ ಫೇಮಸ್ಸಾದ ಮಂದಿಗೆ ಏಜ್ ಆಗ್ತಾ ಮೆಂಟಲ್ಲೇ ಕೈ ಕೊಡ್ತದೆ. ನಮ್ಮ ಇಜ್ಞಾನಿಗೋಳು ಪ್ರೊಫಸರಗಳಲ್ಲಿ ಇದೇ ಗೋಳು. ಇಂಟರ್ ನ್ಯಾಶನಲ್ ಲೆವಲ್ಲಿಗೆ ಫೇಮಸ್ಸಾದ ಈವಜ್ಜನ ಮನಸ್ಸು ಇನ್ನೂ ಯಂಗು. ಅದ್ಕೆ ಎಂಗೋ ಎಲ್ಲೆಲ್ಲೋ ಬೆತ್ಲೆ ಚಿತ್ರ ಬಿಡಿಸಿ ಕುಕ್ಯಾತಿಗೂ ಗುರಿಯಾಗ್ತಾ ಅದೆ. ಮಾಧುರಿ ದೀಕ್ಷಿತ್ ಎಂಬ ಸುರಸುಂದರಿಯ ಹುಚ್ಚು ನೆತ್ತಿಗೇರಿಸ್ಕಂಡು ಸಿಕ್ಕಿದ್ದನ್ನೆಲ್ಲಾ ಆಕಿ ಚಿತ್ರ ಬಿಡಿಸಿ ತೀಟೆ ತಡಿಲಾರ್ದೆ ಅಟ್ ದಿ ಲಾಸ್ಟ್ ಕನ್ನಡಿ ಮುಂದೆ ನಿಂತ್ಕಂಡು ತನ್ನ ಅಂಗಿ ಚೆಲ್ಲಣ ಬಿಚ್ಚಾಕಿದ ಸಾಬಿ, ತನ್ನ ಮೈ ಮ್ಯಾಗೆಲ್ಲಾ ಮಾಧುರಿ ಗೋಂಬಿ ಬರ್ಕೊಂಡು ಅರ್ಧರಾತ್ರಿನಾಗೆ ರೋಡಲ್ಲಿ ಕುಣಿತಿತ್ತು ಎಂಬ ವಾರ್ತೆ ಒನ್ಸ್ ಅಪ್ ಆನ್ ಎ ಟೈಂ ಬಾಂಬೆ ತುಂಬಾ ಹಬ್ಬಿತ್ತಂತ್ರಿ. ಈವಜ್ಜನ ತೆಲಿ ಮತ್ತೋಟು ಕೆಡಲೆಂದೇ ಆಜ್ಜನ್ನ ಪೂರಾ ಬೋಳಿಸಿ ನಿಕಾಲಿ ಮಾಡಲೆಂದೇ ಮಾಧುರಿ ಆತನ ಪೇಂಟಿಂಗ್ ಎಕ್ಸಿಬಿಷನ್ನಿಗೆ ಬಂದೋಳು ಹೋಗೋವಾಗ ಅಜ್ಚನ ಕೆನ್ನೆಗೆ ಒಂದು ಮುತ್ತು ಇಕ್ಕಿ ಹೋದ್ಳು. ಅಜ್ಜ ಸ್ಪಾಟಲ್ಲೇ ಮಟಾಷ್. ಮಾಧುರಿಗೋಸ್ಕರವೇ ಫೀಲಂ ಮಾಡ್ತಿನಿ ಅಂತ ಜಿಗಿದಾಡ್ತಾ ಇದ್ದಬದ್ದ ಕಾಸೆಲ್ಲಾ ಸುರ್ದು ಮಾಡಿದ್ದು ‘ಗಜಗಾಮಿನಿ’ ಅಂಬೋ ಫೀಲುಂ. ಅದ್ಯಾಕೋ ಓಡ್ಡೆ ಅಜ್ಜನ ಗ್ರೇ ಹೇರ್ಸ್ ಉದುರ್ಲಿಕತ್ತಿದ್ದೆ ಆವಾಗಂತೆ. ಸುಮ್ಗಿರಲಾರ್ದೆ ಇರುವೆ ಬಿಟ್ಕಂಡರು ಅನ್ನಂಗೆ ಈ ಮೆಂಟಲ್ ಕೇಸು ನಮ್ಮ ಇದ್ಯಾ ಸರಸ್ವತೀನ ಖುದ್ ನೋಡ್ದೋನಂಗೆ ನೇಕೆಡ್ ಮಾಡಿ ಚಿತ್ರ ಬರ್ದು ಬಿಡೋದೆ! ಸರಸ್ವತಿ ಹಿಂಗೆ ಇದ್ಳು ಅಂಬೋಕೆ ಆಧಾರ ಏನಾರ ಐತಾ? ಹಿಂಗೆಲ್ಲಾ ಭಾಗ್ಸಿ, ಗುಣಿಸಿ, ಆಕಿನ ನೋಡ್ದೋನಾರ ಯಾರವ್ನೆ ಅಂದ್ಕೊಂಡು ನಮ್ಮ ಬುದ್ದಿ ಜೀವಿಗಳು ವಿಸ್ಯನ ನೆಗ್ ಲೆಕ್ಟ್ ಮಾಡಿದರು. ಬೇಲೂರು-ಹಳೇಬೀಡು ಹಂಪಿನಾಗೆಲ್ಲಾ ನಮ್ಮ ದೇವರುಗಳ್ನ ನಮ್ಮೋರು ಬೆತ್ಲೆ ನಿಲ್ಲಿಸೇ ಅಲ್ವೆ ಕಲ್ಲಿನಾಗೆ ಕೆತ್ತಿರಾದು ಅಂತ ತರ್ಕ ಹೂಡಿದ್ರು. ಕೃಷ್ಣ ಭಾಮೆಯ ಸೊಂಟ ಹಿಡ್ಕಂಡು ಎದೆಮ್ಯಾಗೆ ಬಾಗಿ ಅಮರಿಕೊಂಡಗಿಲ್ವೆ? ಶಿವ ಪಾರ್ವತಿ ಯಮ್ಮನ ತೊಡಿ ಮ್ಯಾಗೆ ಕುಂಡ್ರಿಸ್ಕಂಡು ಒಂದು ಕೈನ ಆಕಿ ಎದೆಮ್ಯಾಗಾಸಿ ತಂದಿಲ್ವೆ? ಇವತ್ಲಾಗೋಗ್ಲಿ ಕಾಮಶಾಸ್ತ್ರದ ನಾನಾ ನಮೂನಿ ವಕ್ ಗಳ ಸಾಲುಸಾಲು ಶಿಲ್ಪಗುಳ್ನ ಕತ್ತಿಲ್ವೆ. ಕಾಮಾನೂ ಒಂದು ಆಲ್ಟ್ ಕಣ್ರಿ.

ಬರಿ ಪ್ರೇಮ ಇದ್ದರೆ ಮಗು ಹುಟ್ಟಂಗಿಲ್ಲ. ಸೃಷ್ಟಿ ಮಾಡೋ ಸಗ್ತಿ ಇರೋದು ಕಾಮಕ್ಕೆ. ಕಾಮ ಕೆರಳಿಸೋ ಸಗ್ತಿ ಇರೋದು ಬೆತ್ಲೆ ಮೈಗೆ ಈ ಕಾರಣವಾಗಿ ಕ್ಷಮ್ಯ ಅಂದರು.

ಬೇಲೂರ ಶಿಲಾ ಬಾಲಕಿಯರ ಸೊಂಟ ನಿತುಂಬ ಸ್ತನದ್ವಯಗಳ ಸೊಬಗನ್ನು ನೋಡೋವಾಗ ಕೆತ್ತಿದ ಶಿಲ್ಪಿಮ್ಯಾಗೆ ಕೋರ್ಟ್ನಾಗೆ ಕೇಸ್ ಹಾಕ್ಬೇಕು ಅನ್ನಿಸಿದ್ದುಂಟೇನೇಳ್ರಿ? ಸೂ.ಸಾಬಜ್ಜನೂ ಬರಕಳಿಬಿಡ್ರಿ ಅಂತ ಬುದ್ಧಿವಾದಿಗಳು ಸುಮ್ಮಗಾದರು. ವಾಯುಪುತ್ರನ ಖಾಸಾ ಪುತ್ರರಾದ ಭಜರಂಗಿಗಳು ಮಾತ್ರ ಆಗಾಗ ಅಲ್ಲಲ್ಲಿ ಬಾಯಿಬಡ್ಕೊಂಡ್ರು. ಮೊನ್ನೆನಾಗ ಈವಜ್ಜನ ಒಳಗೇ ಅಡಗಿದ್ದ ವಿಕೃತ ಕಾಮ ಎಕ್ಸ್ಪೋರ್ಡ್ ಆಗಿ ಭಾರತ ಮಾತೆನೇ ಬರಿ ಮೈನಾಗೆ ನಿಲ್ಸಿ ಪೇಂಟಿಂಗ್ ಮಾಡೋದೆ! ತಕ್ಕಳಪ್ಪ ಭಾರತದ ಸಂದಿ ಮೂಲೆಲೆಲ್ಲಾ ಗದ್ದಲ ಶುರುವಾತು. ಈವಜ್ಜನ ಕಣ್ಣು ಹಿಂಗ, ಕೈಗೆ ಲಕ್ವ ಹೊಡೆಯ, ಗಡ್ಡಕ್ಕೆ ಬೆಂಕಿ ಬೀಳ ಅಂತ ಶಾಪ ಹಾಕ್ತ ಬಿಜೆಪಿನೋರು ಅಂಗಾರಾದರು. ಭಜರಂಗದಳ ವಿ.ಹಿಂ.ಪ. ಹಿಂದೂ ಸೇನೆ ಬಾಲಕರು ಸಿಕ್ಕ ಸಿಕ್ಕ ಕಡೆ ಬಂದ್ ಮಾಡಿಸ್ಲಿಕತ್ತಾರೆ. ಸರಸ್ವತಿನ ಬೆತ್ಲೆ ಮಾಡಿ ‘ಸಾರಿ’ ಕೇಳಿದ ಸಾಬಿ ಈಗ ಭಾರತಾಂಬೆಗೇ ಕೈ ಹಾಕಿ ತನ್ನ ಬುಡಕ್ಕೆ ತಂಡ್ಕಂಡದೆ. ನಮ್ಮ ಅತಿಭ್ರಷ್ಟ ರಾಜಕಾರಣಿಗೋಳ ಕೈಗೆ ಸಿಕ್ಕ ಭಾರತಮಾತೆ ಬಡವಾಗವ್ಳೆ, ಬೆತ್ತಲಾಗವ್ಳೆ ಅಂಬೋದ್ನ ಸಾಬಿ ಸೀಂಬಾಲಿಕ್ ಆಗಿ ಹೇಳವ್ನೆ ಅಷ್ಟೆಯಾ ಅಂದ್ರೂ ಕೇಳೋರು ಯಾರು? ಚಂದ್ರಶೇಕರ ಕೈವಾರ್ ಎಂಬ ವಕೀಲ ಹುಸೇನಜ್ಜನ ಮ್ಯಾಗೆ ಕೇಸ್ ಜಡ್ದು ವಾರ್ ಗಿಳಿದಾನೆ : ಇಂಧೋನ ನ್ಯಾಯಾಲಯ ಸಮನ್ಸ್ ಕೊಟೈತೆ. ದೇಶದ ಏಕತೆಗೆ ಭಂಗ ತರೋ ಯಾರೇ ಆಗ್ಲಿ ಅವನ್ನೆ ಮೊದ್ಲು ಬೆತ್ಲೆ ಮಾಡಿ ನಡುಬೀದಿನಾಗೆ ನಿಂದ್ರಿಸಿ ಡ್ಯಾಷ್ ಹಾರ ಹಾಕಿದ್ರೂ ತಪ್ಪೇನಿಲ್ಲ ಬಿಡ್ರಿ. ಈ ಸಾಬಜ್ಜನಿಗೆ ತನ್ನ ದೇವರನ್ನ ಬೆತ್ಲೆ ಮಾಡೋ ತಾಕತ್ತು ಐತೇನು ಅಂತ ಕೆಲವರ ಕೊಶ್ಚನ್ನು. ಅಸಲು ಸಾಬರು ವಿಗ್ರಹ ಆರಾಧಕರಲ್ಲ. ಖುರಾನ್ ಪುಸ್ಕ ಮಸೀದಿನಾಗಿಟ್ಟು ನಮಾಜು ಮಾಡೋ ಪೈಕಿ. ಹಿಂಗಿರೋವಾಗ ಅದ್ಯಾವನೋ ತಲೆಮಾಸಿದ ಕಿರಿಸ್ತಾನರ ಕಾರ್ಟೂನಿಸ್ಟು ಡೆನ್ನಾರ್ಕಿನ ಪತ್ರಿಕೆನಾಗೆ ಕಾರ್ಟೂನ್ ಬಿಡಿಸ್ಯಾನೆ – ಮಹ್ಮದ್ ಪೈಗಂಬರ್ದು. ಪ್ರವಾದಿ ಪೈಗಂಬರ ಹೆಂಗಿದ್ದ್ ಅಂಬೋ ಕಲ್ಪನೆ ಕೂಡ ಇಲ್ಲದ, ಖುರಾನ್ ಎಂದೂ ಓದದ, ಚಿಲ್ಲರೆ ಸಾಬಿಗಳೆಲ್ಲಾ ಮುಸ್ಲಿಂ ರಾಷ್ಟ್ರದಾಗೆ ರಾಂಗ್ ಆಗಿ ಬಂದ್ ದರೋಡೆ ನೆಡೆಸ್ಲಿಕತ್ತಾರೆ. ಬೆಂಗಳೂರು ಹುಬ್ಬಳಿದಾಗ ಅಂಗ್ಡಿ ಲೂಟಿಗುಳೂ ಆಗೊದ್ವು. ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಆ ಕಾರ್ಟೂನಿಸ್ಟನ ತೆಲೆ ಕಡ್ದು ತೇರು ಎಳೆದೋನ್ಗೆ ೧೦೧ ಕೋಟಿ ರೊಕ್ಕ ಅವನು ವೇಟಿದ್ದಷ್ಟು ಗೋಲ್ಡು ಬೋಮಾನ ಕೊಡ್ತೀನಿ ಅಂತ ಫರಮಾನು ಹೊರಡಿಸವ್ನೆ. ಅಂದ ಮ್ಯಾಗೆ ಈ ಮಂತ್ರಿ ತಾವ ಎಷ್ಟು ಭ್ರಷ್ಟ ರೊಕ್ಕ ಇದ್ದೀತು! ಕೊಲೆಗೆ ಪ್ರಚೋದ್ನೆ ಮಾಡಿದ ಇವನ್ನ ಯಾಕಿನ್ನೂ ‘ಅರೆಸ್ಟ್’ ಮಾಡಿಲ್ಲ? ಈ ಮಂತ್ರಿ ಆನೌನ್ಸ್ಮೆಂಟು ಕೇಳಿದ್ದೇ ತಡ ಹಿಂದೂ ಪರ್ಸನಲ್ ಲಾ ಬೋರ್ಡು ನಿದ್ದೆಯಿಂದೆದ್ದು ಕಿಟಾರನೆ ಕಿರುಚಿ ಮೆಂಟಲ್ ಪೇಷಂಟ್ ಹುಸೇನಜ್ಪನ ತೆಲಿ ಕಟ್ ಮಾಡಿ ತಂದೋಗೆ ೫೧ ಕೋಟಿ ಕೊಡಲಾಗುವುದು ಅಂತ ಡಂಗೂರ ಸಾರಿಸೈತೆ. ಹೈಂಗೈತೆ ನೋಡ್ರಿ ಕೂಲೆಗಡುಕರ ಪೈಫೋಟಿ! ಅದೇನೋ ಕಣ್ರಿ ಅಸಲಿಗೆ ನಮ್ಮ ಹಿಂದೂ ದೇವರುಗಳ ಮ್ಯಾಗೆ ನಮ್ಗೇ ಭಯಭಕ್ತಿ ಗೌರವ ನಂಬ್ಕೆ ಏನೇನೂ ಇಲ್ದಂಗಾಗೇತಿ. ಇನ್ನು ಬೇರೆರ್ಗೆ ಅದೆಲ್ಲಾ ಇರ್ಲಿ ಅಂದ್ರೆಂಗಾದೀತೇಳ್ರಿ? ಮೋರ್ ಓವರ್ ನಮ್ಮ ದೇವಾನುದೇವತೆಗಳು ಭಾಳ ಬ್ಯೂಟಿಪುಲ್ಲಾಗಿ ಅದಾರೇಳ್ರಿ. ಅದ್ಯೆ ಜರ್ಮನ್ ಕಂಪನೇವು ಟಿಶ್ಯು ಪೇಪರ್ ಮ್ಯಾಗೆಲ್ಲಾ ರಾಮ ಕಿಸ್ಣನ ಡ್ರಾಯಿಂಗ್ ಬಿಡಿಸಿದ್ದು. ಇನ್ನು ಗ್ರೀಸ್ ವಿಸ್ಕಿ ಕಂಪನೇವು ದುರ್ಗಾದೇವಿ ಅಷ್ಟ ಕೈನಾಗೂ ವಿಸ್ಕಿ ಬಾಟ್ಲು ಕೊಟ್ಟು, ಕುಂಡ್ರಿಸಿಬಿಟ್ಟರು. ಫಾರಿನ್ನೋವು ತೊಟ್ಕೊಂಬೋ ಪೆಟ್ಟಿಕೋಟು ಮ್ಯಾಗೂ ಗಣಪತಿ ಸ್ಲಿಪರ್ ಮ್ಯಾಗೆಲ್ಲಾ ಸೀರಾಮಚಂದ್ರನ್ನ ಬಿಡಿಸ್ಯಾವೆ. ಅದೋಗ್ಲಿ ಇನ್ಬಿಟ್ವೀನ್ ಭಾರತದಾಗೆ ಹುಟ್ಟಿದ ಹೆಮ್ಮೆಯ ಪುತ್ರ ಮಹಾನ್ ಕಲಾವಿದ ಹುಸೇನಜ್ಜಂಗೆ ತನ್ನ ೯೦ರ ವಯಸ್ಸಿನಾಗೆ ಇದೇನು ಮೆಂಟಲ್ ಫೀವರ್ರೋ ಅಥವಾ ಕಾಮಸನ್ನಿನೋ ಆವ ಮುಲ್ಲಾನೂ ಬಾಯಿ ಬಿಡಂಗಿಲ್ಲ. ಅಜ್ಜಂಗೇನಾಗೇತೋ ಅಂಬೋದ ಪರ್ವದಿಗಾರ ಅಲ್ಲಾ ಒಬ್ಬನೇ ಬಲ್ಲ ನೋಡ್ರಿ.
*****
( ದಿ. ೧೩-೦೩-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೬೪
Next post ಎರಡು ಡಿಗ್ರಿ

ಸಣ್ಣ ಕತೆ

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…