ಕೊತ ಕೊತನೆ ಕುದಿದು
ಉಕ್ಕುವ ಸಾರಿನಲಿ
ಉಪ್ಪು ಹುಳಿ ಖಾರಗಳ
ಹದ ಮಾಡಿದ ಹೊದರು
ಉಕ್ಕಿ ಬರುವ ನೊರೆಯ
ಶಾಪ ವಿಮೋಚಿತ ಗುಳ್ಳೆ
ಒಡೆದು ಸ್ರವಿಸಿದ ಕನಸು
ಮುಚ್ಚಿದ ಕದ ಬಿಚ್ಚಿದ
ಶಾಪ ಮುಕ್ತ ಅಹಲ್ಯೆಯರ
ನೋವಿನ ಹನಿಗಳಲ್ಲಿ
ಬೆಳಕಾಗಿ ಕುಡಿಯೊಡೆದು
ಹೂವಾಗಿ ಅರಳಿ ಬಿಚ್ಚಿಕೊಳ್ಳಲಿ
ಮೋಡದಲಿ ಪದರು ಪದರಾಗಿ
ಆಗಸದ ವಿಸ್ತಾರ ಪಡೆದು
ಹಬ್ಬಿ ಹಂದರವಾಗಲಿ
ಕಪ್ಪು ಮೋಡಗಳಲ್ಲಿ ಬೆರೆತು
ಮೆಲ್ಲಮೆಲ್ಲನೆ ಹನಿಯೊಡೆದು
ಮಳೆಯಾಗಿ ಸುರಿಯಲಿ ಬಿಡು
ಕರಕಲಾದ ಕನಸುಗಳ ಚಿಗುರಿಸಿ
ಬರಡಾದ ಭೂಮಿ ಹಸರಿಸಿ,
ಬೆಳಕಿನ ಹಂದರವಾಗಿ ಹಬ್ಬಿ,
ಹರಡಲಿ ಬಿಡು ಬಳ್ಳಿಯಾಗಿ
ಶಾಪ ಮುಕ್ತ ಅಹಲ್ಯೆಯ
ಅಣುಅಣುವಿನ ತುಣುಕುಗಳಾಗಿ.
*****