ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ
ಅವಕಾಶವೆಲ್ಲವನು ತುಂಬಿದರು ದೇಗುಲದಿ
ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ
ಶರಣಾಗಿ ಬಂದಿಹುದು ಈ ಜೀವ ಈ ಬಾಳ
ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ
ನೀಡೆನೆಗೆ ಕಾರುಣ್ಯರೂಪನೇ! ತಾಮಸದ
ಕಜ್ಜಳವ ಕಳೆದೊಗೆದು ತ್ರಿಗುಣದಂಚನು ದಾಟಿ
ವಿಜ್ಞಾನದಾನಂದ ಸೀಮೆಯನು ಸೇರುವೊಲು
ರೂಪಿಸೈ ದಯೆಯಿಂದ ಭಗವಂತ ಬಲವಂತ!
ಅಬಲರಿಗೆ ಬಲವೀವೆ ನಿನಗೆಲ್ಲವೂ ಲೀಲೆ
ನೀ ಕೊಡಲು ನಿಂತಿರಲು ನಾನೇಕೆ ನಿರ್ಬಲನು?
ನನ್ನೆದೆಯ ಬಾನಿನೊಲು ಬಿತ್ತರಿಸಿ ಆತ್ಮದಲಿ
ವಾರಿಧಿಯ ಗಾಂಭೀರ್ಯವನ್ನು ತುಂಬಿ ಪರಮೇಶ
ದಿವ್ಯಕಜ್ಜಕ್ಕಾಗಿ ಕೈದುವೆನ್ನನು ಮಾಡು
*****