ಸೈರಿಸು ಮಗಳೇ
ಹೈರಾಣವಾಗದಿರು
ಶತ ಶತಮಾನಗಳಿಂದ ಬಂದ
ಗತ್ತು ಗಮ್ಮತ್ತು ಶಾಶ್ವತವಲ್ಲ.
ಹೊಸದಂತೂ ಅಲ್ಲ.
ಅಟ್ಟವೇರಿದವರು ಇಳಿಯಲೇ ಬೇಕಲ್ಲ
ನಿನ್ನವ್ವ ನನ್ನವ್ವ ಅವರವ್ವ.
ತುಳಿದದ್ದು ಒಂದೇ ಹಾದಿ
ಕಲ್ಲು ಮುಳ್ಳಿನ ಗಾದಿ
ನಾಲ್ಕು ಗೋಡೆಗಳಲ್ಲೇ ಚಿತ್ತಾರ
ಹೊಸಲಿನಿಂದಾಚೆ ಹೊಸ
ಜಗತ್ತು ಕಂಡರಿಯದೆ
ದನಿಯೆತ್ತದ ದರ್ಪದ
ದಳ್ಳುರಿಗೆ ದಹಿಸಿ ದಹಿಸಿ
ಗುಡುಗಾಗದೆ ಮಿಂಚಾಗದೆ
ತಣ್ಣನೆಯ ಮೋಡವಾಗಿ
ಮಡುಗಟ್ಟೆ ಮಳಮಳಿಸಿ
ಒಳಗೊಳಗೆ ಕುದ್ದು
ಕಾವಿಗೆ ಕರಗಿದವರು
ಕತ್ತಲೆಯ ಕಾಮಕ್ಕೆ
ಬೆತ್ತಲಾಗಿ ಬಸಿರಾಗಿ
ಕಟ್ಟುನಿಟ್ಟಿನ ಮನುಶಾಸನ
ತಪ್ಪದೆ ಪಾಲಿಸಿ ಚರಿತ್ರೆ
ಇತಿಹಾಸದ ಗರ್ಭ ಸೇರದೆ
ಕಥೆ ಕಾದಂಬರಿಗೆ
ವಸ್ತುವಾದವರು
ಸೈರಿಸು ಮಗಳೇ
ಕಾಲ ಯಾರಪ್ಪನದೂ ಅಲ್ಲ.
ನನ್ನ ನಿನ್ನ ಯಾರ ಮಾತು ಕೇಳುವುದಿಲ್ಲ
ಸಹನೆಯ ದೀಪ ಹಿಡಿದು ಕಾಯುತ್ತಿರು
ಬಂದೇ ಬರುತ್ತದೆ
ಅತ್ತೆಗೊಂದು ಕಾಲವಾದರೆ
ಸೊಸೆಗೊಂದು ಕಾಲ.
*****