ಚೈತ್ರ ಬಂದರೇನು?
ಚಿಗುರಿಲ್ಲವಲ್ಲ
ವಸಂತ ಬಂದರೇನು
ಹೂ ಅರಳಿಲ್ಲವಲ್ಲ.
ಯುಗಾದಿ ಬಂದರೇನು?
ಹರುಷವಿಲ್ಲವಲ್ಲ
ಕಟ್ಟಿದ ಕನಸುಗಳು
ನನಸಾಗದೆ ಬಂಧಿಯಾಗಿವೆ
ಭೂತದ ಪಂಜರದಲ್ಲಿ
ಆಸೆ ಭರವಸೆಗಳು ದಹಿಸಿವೆ
ಅಂತರಂಗದ ಅಗ್ನಿಕುಂಡದಲ್ಲಿ
ಹೃದಯ ಮನಸ್ಸುಗಳೆರಡು
ಶಿಲೆಯಾಗಿವೆ.
ಜಡಭರತ | ಸಮಾಧಿಯೊಳಗೆ
ಮುಂದೇನು? ಮುಂದೇನು?
ಭಯಾಂತಂಕದ ಬಿಳಿಲುಗಳು
ನೇತಾಡುತ್ತಿವೆ ಶವದಂತೆ
ಕಾಲವೃಕ್ಷದಲ್ಲಿ.
ಹುಟ್ಟು ಸಾವು, ನೋವು ನಲಿವು
ಬೆಲ್ಲ ಬೇವು
ತಾಕಲಾಟದ ತಕ್ಕಡಿಯಲ್ಲಿ.
ಯುಗಾದಿ ಬಂದರೇನು?
ಬಾರದಿದ್ದರೇನು?
ಬದಲಾಗದು ಸ್ವರತಾನ
ಅದೇ ರಾಗ ಅದೇ ಹಾಡು
ಬದುಕು ಬರಡು
ಬವಣೆ ಗೂಡು.
*****



















