ಬಂದೆಯಾ ಬಾ, ಬಂದಾಯಿತಲ್ಲ
ಇನ್ನೇಕೆ ಮೀನಮೇಷ.
ಮೂರು ಬಿಟ್ಟು ನಿಂತಿರುವ ಅಭ್ಯಾಗತ
ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ
ನಿನ್ನದೇನು ಹೆಚ್ಚುಗಾರಿಕೆ
ಅರವತ್ತರಲ್ಲಿ ನೀನು ಒಬ್ಬ.
ಹೊಸ ವೇಷ ಹಳೆ ಹೆಸರು
ಬರಿಗೈಯಲ್ಲಿ ಬಂದಿರುವೆಯಾ ಹೇಗೆ?
ಏನೇನು ತಂದಿರುವೆ ಕೊಡುಗೈದಾನಿ
ಇದೇನಿದು ಉಂಡೆಗಾತ್ರ ಬೆಲ್ಲ
ಬೆಟ್ಟದಷ್ಟು ಬೇವು.
ಕೈಯಲ್ಲಿ ಕಡೆಗೋಲು, ಪೆಟ್ರೋಲು
ಯಾರಿಗೇನು ಕಡಿಮೆಯಿಲ್ಲದ ಸವಾಲು.
ಒಂದು ಒಳ್ಳೆ ಮಾತು ಕಿವಿಗೊಟ್ಟು ಕೇಳಿ
ಹೇಗೆ ಬಂದೆಯೋ ಹಾಗೆ
ಸದ್ದಿಲ್ಲದೆ ಹಿಂದಿರುಗು
ಇದ್ದಾರಿಲ್ಲಿ ನಯವಂಚಕರು
ಗೋಮುಖ ವ್ಯಾಘ್ರರು, ದೇಶದ್ರೋಹಿಗಳು
ಮಾಡಬಾರದ್ದು ಮಾಡಿ ಗೂಬೆ ಕೂರಿಸುತ್ತಾರೆ.
ರಾಜಕೀಯ ಚದುರಂಗದಾಟಕ್ಕೆಳೆದು
ಕೋಮುಗಲಭೆಯ ಹೆಸರಲ್ಲಿ.
ಮುಗ್ಧ ಜನರ ಮಾರಣಹೋಮ
ಬೆಲೆಗಳ ಗಗನಕ್ಕೇರಿಸಿ
ಬಂಡವಾಳ ಬರಿದಾಗಿಸಿ
ಬಡವರ ಆತ್ಮಹತ್ಯೆಯ ಹುನ್ನಾರ
ಹಣ್ಣು ತಿಂದು ಸಿಪ್ಪೆ ಎಸೆವರು
ನನಗೇನು ನಿನಗೆ ಕೆಟ್ಟ ಹೆಸರು
ಅಯ್ಯೋ ಪಾಪ ಬಂದಿದ್ದೀಯಾ
ಇದ್ದುಬಿಡು ಇಷ್ಟ ಮಿತ್ರನಂತೆ
ದಾಖಲೆಯಾಗಲಿ ಸವಿನೆನಪಗಳು
ಶಾಶ್ವತವಾಗಲಿ ಹೆಜ್ಜೆ ಗುರುತುಗಳು
ಮನುಕುಲ ಹಾಡಿ ಹೊಗಳಲಿ
ಸ್ಮರಿಸಲಿ ನಿನ್ನ ಔದಾರ್ಯ.
*****