ಶಾಂತಿ ಶಾಂತಿ ಶಾಂತಿ
ಶಾಂತಿ ಮಂತ್ರ ಊದಿದ
ಬಾಯಿಗಳಲ್ಲಿಂದು ರಣಕಹಳೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ
ಸರ್ವಾಧಿಕಾರದ ಪರಮಾವಧಿ
ರಕ್ಷಕರೇ ಭಕ್ಷಕರಾಗಿ
ನುಡಿಸಿದರು ಭೀಭತ್ಸಗಾನ
ದೇವರಿಗೂ ಸಡ್ಡು ಹೊಡೆದು
ಮಾಡಿದರು ಮಾರಣ ಹೋಮ
ಕ್ಷಣಕ್ಕೊಂದು ಅವಿಷ್ಕಾರ
ಸಾವನ್ನೇ ಗೆಲ್ಲುವೆನೆಂಬ ಅಹಂಕಾರ
ಗನ್ನು ಬಾಂಬು ಅಣ್ವಸ್ತ್ರಗಳ ಆಕ್ರೋಶ
ಸುಡು ಸುಡುವ ಭಾವ
ಕೆಂಡ ಕಾರುವ ವಲಯ
ಬುಗಿಲೆದ್ದು ಮುಗಿಲೆತ್ತರ
ವಿಶ್ವವನ್ನೇ ನಡುಗಿಸುವ
ರಕ್ತದೋಕುಳಿಯ ಪ್ರವಾಹ
ಹೆಪ್ಪುಗಟ್ಟಿಸುವ ಆರ್ತನಾದ
ಹೃದಯ ಹಿಂಡುವ ನೋವಿನ ಬಲೆ
ಅಮಾಯಕ ಜನರಿಗೆಲ್ಲಿದೆ ನೆಲೆ
ಬತ್ತಿ ಹೋಗಿದೆ
ಮಾನವೀಯತೆಯ ಸೆಲೆ.
*****



















