ಹರಿಯಗೊಡದಿರು ಮನವೇ
ಎಲ್ಲೆಂದರಲ್ಲಿ
ಮನವು ಮರ್ಕಟವೆಂಬ
ಮಾತು ನಿಜವಿಲ್ಲಿ.
ಓಡುವುದು ನದಿಯಂತೆ
ಬೀಸುವ ಗಾಳಿಯಂತೆ
ಕತ್ತಿಯ ಅಲುಗಿನಂತೆ
ಸುಳಿಯುವುದು ಕ್ಷಣ ಕ್ಷಣ
ಚಪಲ ಚಿತ್ತವ ಹಿಡಿದು ಕಟ್ಟುವ
ಇಂದ್ರಿಯ ನಿಗ್ರಹ ಶಕ್ತಿ
ಇದ್ದರೆ ನೀನಾಗುವೆ ಮಹಾವ್ಯಕ್ತಿ
ಯತ್ನದಿಂದ ಪ್ರಯತ್ನದಿಂದ
ಸಾಧನೆಯ ಬಲದಿಂದ
ಮನಕೆ ಹಾಕು ಲಗಾಮು
ನಿನಗೆ ತೋರುವ ಹಾದಿಯಲಿ
ಛಲದ ಅಭಿವ್ಯಕ್ತಿಯಲಿ
ಮನವ ಮುನ್ನಡೆಸು
ಮೂಗು ತೂರಿಸದಿರು
ಪರರ ವಿಷಯಾಸಕ್ತಿಗೆ
ಚಿಂತೆಯ ಚಿತೆಯಲಿ
ಬೇಯದಿರು ಬರಿದೆ
ಗಾಳಿಯನು ಗುದ್ದಿ
ಮೈ ನೋಯಿಸುವ ಪರಿ
ದುಡುಕುತನದ ದೂರ ಸರಿ
ಚಿಂತಿಸದಿರು ವ್ಯರ್ಥ ಜಿಜ್ಞಾಸೆಯಲಿ
ಕತ್ತಲಿನ ಗರ್ಭವ ಸೀಳಿ
ಹೊರಬರಲಿ ವಾಸ್ತವತೆಯ ಬೆಳಕು
ಹಣ ಅಂತಸ್ತು ಅಧಿಕಾರ
ಇರಬಹುದು ಬಾಳಿಗೆ ಸಾಕಾರ
ಜೀವನವೆಂದರೆ ನೂರು ಅರ್ಥ
ಅರ್ಥದಿಂದಲೇ ವೇದಾಂತ
ಸಿದ್ಧಾಂತ
ಅರಿತು ನಡೆದರೆ ಸುಖಾಂತ
*****