ಮುಂಜಾನೆ ಸೂರ್ಯನ ಕಿರಣಗಳು ಸೋಕಿ
ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು.
ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು
ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ
ಗಳಿಗೆಗಳು.
ನಂಬಿಕೆಗಳು ಊರತುಂಬ ಹರಡಿದ ಗಾಳಿ.
ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿದು
ಹೋಗಿದೆ. ಹೆಪ್ಪುಗಟ್ಟಿದ ಕಾಲವನ್ನು ಹುರಿಗೊಳಿಸುವ
ನಡೆದು ಹೋಗುವನ ಬೆರಳಿಗೆ ತಾಗಿದ ನೆಲದ ನಿಧಾನ.
ಮನಸ್ಸಿನ ದೇವರು ಪ್ರಜ್ಞೆಯ ಇಂದ್ರೀಯ ಸುಖ,
ಅವರು ಬಿಟ್ಟು ಇವರ್ಯಾರು ವೈರುದ್ಯಗಳ ಮಧ್ಯೆ.
ದಹಿಸುವ ವಿಶ್ವ ಚೇತನ ಕಾವ್ಯದ ಧಾರೆ,
ಸಾವನ್ನು ಹೆಲ್ಲುವ ಹವಣಿಕೆಯ ಹಣತೆಯ ಬೆಳಕು.
ಕನ್ನಡಿಯಲಿ ಕಂಡ ಮುಖ ಸಮೂಹದಲಿ ತೇಲಿ
ಬೀದಿ ಬೀದಿಯಲ್ಲಿ ರಂಪರಾಟಗಳು ಅರಳಿ
ಕಂಡ ಮನಸ್ಸುಗಳ ಕಿಡಿಗೇಡಿತನ ತಿರುವುಗಳು,
ಒಳಗೊಳಗೆ ಇಳಿದ ಬೆಲ್ಲದ ಗಟ್ಟಿಪಾಕ ಸತ್ಯಗಳು.
`ನಾಜೂಕಿನ ಕ್ಷಣಗಳು ಬಯಲಲಿ ಕರಗಿ ಮತ್ತೆ
ಬಿಳಿ ಮೋಡಗಳು ನೀಲಿ ಆಕಾಶದಲಿ ತೇಲಿ ಮತ್ತೆ
ಬೆಳಕಿನ ಕತ್ತಲಿನ ಪಲ್ಲಟಗಳು, ಸುರಿ ಮಳೆಯಲಿ
ಅವ್ವ ಹಚ್ಚಿಟ್ಟ ಕಂದೀಲು ವರ್ಣದ ಹೊಂಗಿರಣ ಸೂಸಿತು.
*****