ಕಾರ್ಮೋಡ ಮುತ್ತಿಗೆಯ ಕಿತ್ತೊಗೆದ
ಅನಂತಾನಂದಮಯಮಾಕಾಶ!
ಗಿರಿಗಹ್ವಕರಗಳಾಚೆಯಲಿ ಗಗನದಲಿ
ತೇಲಿ ತಿರುಗುತಿಹ ಗಿಳಿವಿಂಡು!
ಸರಸಿಜಳ ಸೆರೆಬಿಟ್ಟು ಸ್ವರ್ಣೋಜ್ವ-
ಲೋದಯದ ಸುಮಂಗಲ ಪಾಡಿ
ಕುಲುನಗೆಯ ಕುಸುಮಗಳ ಮೂಸಿ
ಮುತ್ತಿಟ್ಟು ಮಧುವನೀಂಟುತಿಹ
ತುಂಬಿಗಳು! ಏನಿದಚ್ಚರಿಯಮಮ!
ಕೊನೆಯಿಲ್ಲದಾನಂದಮಯ ಕಡಲು!
ನಭೋಮಂಡಲದಾಚೆಯಲಿ ಏನೊ
ದನಿಯೊಂದು ಕೇಳುತಿದೆ. ಹೃದಯ-
ವನೆ ಕುಲುಕಿ ಚೈತನ್ಯಕನುಮಾಡಿ
ಕೊಡುತಲಿದೆಯೆನ್ನ ತನುವಿನಾಣು
ಪರಮಾಣುಗಳಲಿ ಸ್ಫೂರ್ತಿ ಸ್ಫುಟ-
ಗೊಂಡು ಚಿಮ್ಮುತಿದೆ; ಹೊರಹೊಮ್ಮುತಿದೆ!
ಮಲಗಿ ನಿದ್ರಿಸುವ ಮುಖಹೀನರನು
ಬಡಿದೆಬ್ಬಿಸುವ ಜವ್ವನುಡಿಸುತ್ತಿದೆ!
ನನ್ನನೆಚ್ಚರಿಸುತಿಹ ದನಿಯದಾವದು?
ಅದುವೆ ಹೊಸಯುಗದ ಹೊಸದಿನದ
ಹೊಸದನಿಯ ಹೊಸ ತುತ್ತೂರಿ!
*****