ಅರುಂಧತಿ ಅಪ್ಪನಿಗೆ ತಕ್ಕ ಮಗಳು
ತೋರಿದ ದಾರಿಗುಂಟ ಮೌನವಾಗಿ
ನಡೆದಳು ಹಡೆದಳು ಹತ್ತು ಪುತ್ರರ
ವಶಿಷ್ಠರ ಆಶ್ರಮದಲ್ಲಿ ಕಾಮಧೇನು ಹಾಲು.
ಪತಿಯ ಮಾತು ಚಾಚೂ ತಪ್ಪದ
ಅವಳ ನಡುಗೆ ಮಹಾಮನೆ ನಿರ್ಮಿಸಿ
ಬಯಲ ತುಂಬ ಹೂ ಹಣ್ಣು, ಹಸಿರು
ತಾಯಿ ಒಡಲ ಕರೆಯ ನಾದ ಹೊಮ್ಮಿಸಿದಳು.
ತಪದ ತಾಪದ ಗಂಡ. ಮುನಿದರೆ ಎಂಬ
ಆತಂಕದ ಅವಳ ನಡುಗೆ, ಮೌನ ಪಾಠ
ಅವನೆದೆ ಕರಗಿ ಒಲವಿನ ದಾಂಪತ್ಯ
ಅವನಲ್ಲಿ ಅವಳು ಒಂದಾಗಿ ಬಿಂದುವಾದಳು.
ನಯ ನಾಜೂಕಿನ ನಾರುಮಡಿ ಉಟ್ಟು
ಗಾಂಭಿರ್ಯದ ನಡುಗೆ, ಅಂತರಂಗದ
ಮೃದಂಗದ ಕಲರವ, ಬಲ್ಲವರಿಗೆಲ್ಲಾ ಮಹಾ
ತಾಯಿ ಹೆತ್ತಳು ಹತ್ತು ಮಕ್ಕಳ ಮನೆತುಂಬ.
ಕಲ್ಲು ತುಣುಕಗಳ ಹಣ್ಣು ಹಂಪಲ ಮಾಡಿ
ಋಷಿ ಮುನಿಗಳಿಗೆ ಉಣ್ಣಲು ಕೊಟ್ಟ
ಸರಳ ಸುಂದರ ಮನಸ್ಸು, ದೇವತೆಗಳು
ಏನೂ ಬೇಸಲಿಲ್ಲ. ಸಾಫಲ್ಯ ದಾಂಪತ್ಯದ
ಚಿಕ್ಕಿಯಾಗಿ ಮುಗಿಲೇರಿದಳು.
*****