ಗಟ್ಟಿಯಾಗದೇ ಬದುಕು ದಕ್ಕದುನ್ನು
ಕೆರೆ ಬಾವಿಗಳ ಪಾಲು ಆಗದಿರು
ಹಗ್ಗದ ಉರುಳಿಗೆ
ನಿನ್ನ ಕೊರಳ ನೀಡದೇ
ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ
ಬೆಂಕಿಯ ಜ್ವಾಲೆಗೆ ದೂಡುವ
ಕೈಗಳನ್ನು ಕತ್ತರಿಸಲು
ಝಳಪಿಸುವ ಖಡ್ಗವಾಗು.
ಶತ್ರುಗಳ ಸೆಣಸಿ ನಿಲ್ಲಲು
ಆತ್ಮವಿಶ್ವಾಸದ ಆಯುಧವಾಗು,
ಏನಾದರೂ ಆಗು ಕೊನೆಗೆ
ದಹಿಸುವ ಜ್ವಾಲೆಗಳ ನಂದಿಸಲು
ಸ್ವಾತಿಯ ಮುತ್ತಿನ ಮಳೆಯಾಗು,
ಅನಂತ ಜೀವನದ ವ್ಯಥೆಗಳು
ಅಮೂಲ್ಯ ಬದುಕು ಚಿವುಟಿ
ನಿರರ್ಥಕ ನಿಟ್ಟುಸಿರಾಗದೇ
ಸಮೃದ್ಧ ನೆಲದಲ್ಲಿ
ಹಸಿರುಟ್ಟು ಬೇರು ಬಿಟ್ಟು
ಅಸ್ತಿತ್ವಕ್ಕೆ ಅರ್ಥ ನೀಡುವ
ಕಂಪ ಸೂಸುವ
ಸಂಪಿಗೆ ಮರವಾಗು,
ಬಿದ್ದ ಮಳೆಗೆ ನೆಲದ ಹಸಿಗೆ
ಧರೆಯ ಎದೆಯಲಿ ರೋಮಾಂಚನ
ಎದೆಯಲಿ ಧವನ ಚಿಗಿತು
ಮೈಮನಗಳಲ್ಲಿ ಮಿಂಚಿನ ಸಂಚಾರ
ಹೊಳೆವ ಕಾಂತಿಯ ಕಣ್ಣುಗಳಲಿ
ಆತ್ಮವಿಶ್ವಾಸದ ದೃಢ ನಿರ್ಧಾರ
ಉಕ್ಕಿ ಹರಿದಿದೆ ಜೀವಜಲ.
ಧಮನಿಗಳಲಿ ನಿರಂತರ
ಬಿಗಿದಿರುವ ನರನಾಡಿಗಳಿಗೆ
ಸ್ನೇಹದ ತಂಪು ಸಿಂಚನ
ಬದುಕಿನ ಹುಡುಕಾಟ,
ಅದೇ ಕ್ಷಣ ಮತ್ತೇ ಮತ್ತೇ
ಬದುಕು ಒಳಹೊರಗು ಹುಡುಕುತ್ತ
ಗಡಿರೇಖೆಗಳ ಮೆಟ್ಟಿ ನಿಂತು
ಬದುಕುವ ಬದುಕಿಸುವ ಪ್ರಯತ್ನ
ಆಗಲಿ ಇದುವೇ ಮುಕ್ತಿ ಮಂತ್ರ
*****