ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು
ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು
ಮನಸಾರೆ ನಗುವಿಯೇತಕೆ ಅಣ್ಣ? ನೀ
ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ.
ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ.
ಕವಿಕಂಠೀರವರ ಕೀರ್‍ತಿಯನೆ ಬಯಸಿಲ್ಲ.
ನನ್ನೆದೆಯ ದನಿ ನುಡಿಸಿದುದ ಮೂಡಿಸಿದೆ.
ಜೀವನದುಸಿರು ಭಾವದಿ ಬೆರೆತು ಹಾಡಿದುದು.
ಭೂಗರ್‍ಭವನೆ ಸೀಳಿ, ಭೂತಲ ಕಂಡು
ಬೀಜಗಳ ಬಿತ್ತಿ ಬೆಳೆಕೊಂಡು, ಜಗದ ಬಾ-
ಯ್ಗಿಟ್ಟು, ಹೊಟ್ಟೆಗಿಲ್ಲದೆ ಕೆಟ್ಟು, ಕಣ್ಣೀರ
ಸುರಿಸುತಿಹ ಕಂಗಾಲನೊಡಲನೊಳಸೇರಿ
ನೆತ್ತರದ ನಾಡಿಗಳನದುಮಿ ದನಿಗುಡಿಸಿ
ಹಾಡಿದೆನು; ಹಾಡುತಿಹೆ; ಹಾಡುವೆನು.
ಅಪರಾಧಮೇನಿದರೊಳಗೆ ನಗುವ ಅಣ್ಣ?
ಕವನದ ಗುಟ್ಟು ಕಟ್ಟಿನೊಳಗಿಲ್ಲವೆಂಬುದ-
ನರಿದು ನಿರ್‍ಬಲರ ನಗುವ ನಿಲ್ಲಿಸಿ ಬಾ ಸಡ್ಡು-
ಹೊಡೆ. ನನಗು ಮಿಗಿಲೆನಿಪ ಕವಿತೆಗಳ
ಕಟ್ಟು. ಆಗೆನ್ನ ಕಂಡು ಮನದಣಿಯೆ
ನಗು; ನಿನ್ನ ನಗುವಿಗೆ ಬಹುದು ಬೆಲೆ.
*****