ಕೃಷ್ಣನಿಗಾಸೆ ನೂರು
ಅದಕೆ ಹೆಂಡಿರು ಮೂರು
ಹೆಂಡಿರಿಗಾಸೆಯೆ ಇಲ್ಲ
ಮರ್‍ಮವ ತಿಳಿದವರಾರು?

ಪತಿವ್ರತೆಯೆಂಬುದು ಧರ್‍ಮ
ಪುರುಷನಿಗ್ಯಾವುದು ಧರ್‍ಮ
ಧರ್‍ಮವನೇರಿದ ತಪ್ಪಿಗೆ
ಕಾವಲು ಇವನ ಕರ್‍ಮ!

ಹೆಣ್ಣು ಪೂರ ಅಬಲೆ
ಜೊತೆಗೆ ಕೊಂಚ ಚಂಚಲೆ
ಯಾರ ಬಾಯಿಂದ ಈ ಮಾತು
ಯಾವ ಆತಂಕದಲಿ ಹೂತು!

ಹೆಣ್ಣಿಗಾಸೆ ಗುಣಗಾನ
ಅದಕೆ ಏರಿಹಳು ನುಗ್ಗೆ
ಬೀಳದಿರುವ ಅವಳು
ಒಡೆದಿಹಳು ತಳದ ಬುಗ್ಗೆ!

ಹೆಣ್ಣು ಹೌದೆ ಹೆಣ್ಣು? ಅಲ್ಲವೆ
ನಿನ್ನ ದೇಹದಂತೆ?
ತುಳಿಯ ಹೋಗಿ ನೀನು ಕಡೆಗೆ
ತುಳಿಸಿಕೊಳುವುದೇಕಂತೆ!

ನೀನು ನಡೆಸುವಾಟ ಹೇಗೊ
ಧರ್‍ಮಯುದ್ಧದ ಜೊತೆಗೆ
ನಡುವುದ್ಹೇಗೆ ಹೇಳು ಇಲ್ಲಿ
ಗೆರಿಲ್ಲಾ ಯುದ್ಧದ ಜೊತೆಗೆ!
*****