ಕೊರವಂಜೀ ಹಾಡು

ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ
ಬಾ ನನ್ನ ಮಗನಽ ಅಬರಂಗ ಧೊರಿಯಽ
ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ |
ಬಂದೊಮ್ಮೆ ಮಕದೋರೊ ||೧||

ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ
ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ
ಬಿಟ್ಹಚ್ಚ ತವರ್ಮನಿಽಗೇ | ನಾ ನನ್ನ |
ಬಲ್ಲಂತ ಸುಳಿಗಾರನಽ ||೨||

ನಿಂಬಿಽಯ ಬನದಾಗೆ ಕಂದ ಚೆಂಡಾಡ್ಯಾನ
ಬಾ ನನ್ನ ಮಗನಽ ಅಬರಂಗ ಧೊರಿಯಽ
ನಿಂಬಿಕಿಂತಾ ಛೆಲಿವ್ಯೋ | ನನ ಸೊಸಿ |
ಬಂದೊಮ್ಮೆ ಮಕದೋರೊ ||೩||

ನಿಂಬಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ
ಕಟ್ಟೀದ ಕರಮಣಿಽ ಹೆರಕೋರ್ಹಡದವ್ವಾ
ಬಿಟ್ಹಚ್ಚ ತವರ್ಮನಿಽಗೇ | ನಾ ನನ್ನ |
ಬಲ್ಲಂತ ಸುಳಿಗಾರಽ ||೪||

ಅಣ್ಣಾನ ಮಗಳಂತ ಹಮ್ಮೀಲಿ ಕರತಂದ
ನನ ಮಽಗ ಮಾತಾ ಕೇಳವಲ್ಲ ಸೊಸಿ ಮುದ್ದ
ಹೋಗವ್ವ ತವರ್ಮನಿಽಗೆ | ಸೊಸಿ ಮುದ್ದ |
ಹೋಗವ್ವ ತವರ್ಮನಿಽಗೆ ||೫||

ಅಣ್ಣ್ಯಾರ ತಮ್ಮ್ಯರ ತಾಯ್ಯಾರ ತಂದ್ಯಾರ
ಅಣಾನ್ಹೆಂಡಾರೊಂದವರ್ಯಾಽರತ್ತೆವ್ವಾ
ಹೋಗ್ಲಾರೆ ತನರ್ಮನಿಽಗೆ | ಅತ್ತೆವ್ವ |
ಹೋಗ್ಲಾರೆ ತವರ್ಮನಿಽಗೆ ||೬||

ಒಂದ ಹೊನ್ನಽ ಕೊಟ್ಟು ಮದಿವ್ಯಾರೆ ಮಾಡಿಽದಿ
ಎರಡ್ಹೊನ್ನ ಕೊಟ್ಟು (ಕೊರವಂಜಿ) ಬುಟ್ಟಿ ಕೊಂಡು ಕುಽಡತ್ತಿ
ಗಂಡಽನ ನೋಡಿ ಬರುವೆ | ಗಂಡನ|
ರಂಡೀಯ ನೋಡಿ ಬರುವೆ ||೭||

ಒಂದ ಮೈ ಮುತ್ತಽ ಹಚ್ಚಿ ಒಂದ ಮೈ ಮಾಣಿಕ ಹೆಚ್ಚಿ |
ಕೆತ್ತ ಮಾಣಿಕ ಬಟ್ಟಿ ತಂದಿಟ್ಟಾಳತ್ತೆವ್ವ |
ಆ ಕ್ಷಣಕ ತಂದಿಟ್ಟಾಳತ್ತೆವ್ವಾ ||೮||

ಚೆಪ್ಪೂಲಿ ಮೆಟ್ಟಿದಾಳಽ ಎನ್ನಮ್ಮ |
ಚೆಪ್ಪೂಲಿ ಮೆಟ್ಟಿದಾಳ ಎನ್ನಮ್ಮ |ಚೆಪ್ಊಪಲಿ ಮೆಟ್ಟಿದಾಳ |
ರಾಯಽರ ಇರುವೂದು ರಾಜಪಟ್ಟಣದ್ಹಾದಿ ದಾನದೊಂದ್ಹೇಳಿ
ಕೊಡಿರಿ ||೯||

ದನಕಾಯೊ ಅಣ್ಣಗಳಿರ್ಯಾ ಎನ್ನಮ್ಮ |
ದನಕಾಯೊ ತಮ್ಮಗಳಿರ್ಯಾ ಎನ್ನುಮ್ಮ | ದನಕಾಯೊ ಅಣ್ಣಗಳಿರ್ಯಾ |
ರಾಯಽರ ಇರುವೂದು ರಾಜಪಟ್ಟಿಣದ್ಹಾದಿ ದಾವದೊಂದ್ಹೇಳಿ
ಕೊಡಿರಿ ||೧೦||

ಬಾಳಿಽಯ ಬಲಕ್ಹಾಯ ಎನ್ನಮ್ಮ |
ನಿಂಬಿಽಯ ಎಡೆಕ್ಹಾಯ ಎನ್ನಮ್ಮ | ನಿಂಬಿಽಯ ಎಡೆಕ್ಹಾಯ |
ನಾಗಸಂಪಿಗೆಽಯ ನುಡುವ್ಹಾಯ ಕೋಲು ಕೋಲಣ್ಣ ಕೋಲ ||೧೧||

ಹಸರೊಂದು ಉಟ್ಟಿದಾಳಽ ಎನ್ನಮ್ಮ |
ಹಸರೊದು ತೊಟ್ಟಿದಾಳ ಎನ್ನಮ್ಮ | ಹಸರೊಂದು ತೊಟ್ಟಿದಾಳ |
ಹೆಸರೊಂದ ಸೆರಗಾ ಮರಿಮಾಡಿ ತನ್ನಂಥಾ ಹೆರದ್ಯಾರನ
ಬಲಗೊಂಡಾಳ ||೧೨||

ಕೆಂಪೊಂದು ಉಟ್ಟಿದಾಳಽ ಎನ್ನಮ್ಮ |
ಕೆಂಪೊಂದು ತೊಟ್ಟಿದಾಳ ಎನ್ನಮ್ಮ | ಕೆಂಪೊಂದು ತೊಟ್ಟಿದಾಳ |
ಕೆಂಪೊಂದು ಸೆರಗಾ ಮರಿಮಾಡಿ ತನ್ನಂಥಾ ಬಾಲ್ಯಾರನ
ಬಲಗೊಂಡಾಳ ||೧೩||

ಆನಿ ಆನಿಽಯ ಮುಂದ ಎನ್ನಮ್ಮ |
ಆನಿಽಯ ಮರಿಮುಂದ ಎನ್ನಮ್ಮ | ಅನಿಽಯ ಮರಿಮುಂದ |
ಆನಿಽಯ ಏರೂವ ಚೆದರ ಮನ್ನೆ ರ ಮಗಳು ಹೊಂಟಾಳ
ರಾಜಬೀದಿಽಗೆ ||೧೪||

ಒಂಟಿ ಒಂಟಿಽಯ ಮುಂದಽ ಎನ್ನಮ್ಮ |
ಒಂಟಿಽಯ ಮರಿಮುಂದ ಎನ್ನಮ್ಮ | ಒಂಟಿಽಯ ಮರಿಮುಂದ |
ಒಂಟಿಽಯ ಏರೂವ ಭಂಟ ಮನ್ನೆರ ಮಗಳು ಹೊಂಟಾಳ
ರಾಜಬೀದಿಽಗೆ ||೧೫||

ಕಾಲ ಕಂಚಿನ ಪಿಲ್ಲೆ ಕಿಂವಿಯಾಗ್ಹಿತ್ತಾಳಿ ವಾಲಿ |
ಸರಪಽಳಿ ಘಂಟಿ ಸರದಾಽಳೆವ್ವ ನೀ |
ಯಾ ನಾಽಡದ ಕೊರಿವೇ | ಜಾಣಿ ನೀ |
ಯಾ ನಾಽಡದ ಕೊರಿವೇ ||೧೬||

ಆ ನಾಡದ ಕೊರಿವ್ಯಲ್ಲ ಈ ನಾಡದ ಕೊರಿವ್ಯಲ್ಲ|
ದೇವಲೋಕಾದಽ ಕೊರಿವಿದ್ದೊ ಜಾಣ ನಾ|
ದ್ಯಾವಾರ್ಹೇಳತೇನೊ | ಕೈ ತಾ |
ಕೈ ತಾ ಕೈ ತಾರೋ ||೧೭||

ಆ ನಾಡದ ಕೊರಿವ್ಯಲ್ಲ ಈ ನಾಡದ ಕೊರಿವ್ಯಲ್ಲ|
ದೇವಲೋಕಾದಽ ಕೊರಿವಿದ್ದೊ ಜಾಣ ನಾ|
ದ್ಯಾವಾರ್ಹೇಳತೇನೊ | ಸೂಳ್ಯಾರು |
ಮಾಡೇರೆ ಹೊಡಿತಾರೊ ||೧೮||

ನನ್ನ ಮಡದಿನ ಬಿಟ್ಟು ಹನ್ನೆರಡು ವರುಷಾಯ್ತು |
ಮಡದೀಗ ನನಗಽ ಕೂಡಿಸ ಕೊರವಂಜಿ |
ಕೈಯಾರೆ ಜೋಡಸ್ತೇನ | ನಾ ನಿನ್ನ |
ಕಾಲಾರೆ ಬೀಳ್ತೇನ ||೧೯||

ನನ್ನ ಮಡದಿನ ಬಿಟ್ಟು ಹನ್ನೆರಡು ವರುಷಾಯ್ತು |
ಮಡದೀಗ ನನಗಽ ಕೂಡಿಸ ಕೊರವಂಜಿ |
ಕರಕೊಂಡು ಬರತೀನ | ನಾ ನಿನಗ|
ಸೀರಿ ಕುಬಸ ಮಾಡ್ತೇನ ||೨೦||

ನನ ಕಾಲ ಬೀಳಲಕ ನನ್ನ ಕೈ ಜೋಡಿಸಲಕ |
ಯಾರೀಗಿ ಯೇನಽ ಮಾಡೀಽದಿ ಮಾರಾಯಾ |
ಹೋಗೂನು ನಡೀರಿ | ಮಾರಾಯಾ |
ಹೋಗೂನು ನಡೀರಿ ||೨೧||

ಗಂಡಹೆಂಡರವರು ಗರದೀಲಿ ಬರುವಾಗ |
ಕತ್ಹೆಂತ ರಂಡೀ ಬೆನ್ಹತ್ತಿ ಬರತಾಳ |
ಹೊಡೆದ್ಹಾಽಕ್ಹಿಂದಽಕ | ಆಕಿ ತನ್ನ |
ಹೊಡಮಽಳಿ ಹೊಳ್ಳಿ ದಂಽಗ ||೨೨||

ಆರು ವರುಷಾ ತಿರುಗಿ ಅರಸಽರ ತಂದೀದ।
ಅತ್ತಿ ಬಾ ಹೊರಿಯಾಕ | ನಿನ ಮಗನ |
ಕರಕರೊಳಿಯಾಽಕ ||೨೩||
*****

ಮಗನೊಬ್ಬನು ತನ್ನ ಮಡದಿಯನ್ನು ಬಿಟ್ಟು ಸೂಳೆಯೊಡನೆ ಬೇರೂರಲ್ಲಿದ್ದಾನೆ. ಆತನ ತಾಯಿಯು ಆತನೊಮ್ಮೆ ಬಂದಾಗ ತನ್ನ ಸೊಸೆಯ ರೂಪವನ್ನು ವರ್ಣಿಸಿ ಅವಳೊಡನೆ ಇರುವುದಕ್ಕೆ ಮನವೊಲಿಸಲೆಳಸುತ್ತಾಳೆ. ಆದರೆ ಆತನು ಇದಕ್ಕೆ ಒಪ್ಪುವುದಿಲ್ಲ. ಇದು ಮೊದಲಿನ ನಾಲ್ಕು ನುಡಿಗಳ ಸಾರಾಂಶ. ಆ ಮೇಲೆ ಅವಳು ಉಪಾಯವಿಲ್ಲದೆ ತನ್ನ ಅಕ್ಕರತೆಯ ಸೊಸೆಗೆ ತವರೂರಿಗೆ ಹೋಗಲು ಹೇಳುತ್ತಾಳೆ. ಅದಕ್ಕೆ ಅವಳು ಒಪ್ಪುವುದಿಲ್ಲ. ಕೊರವಂಜಿಯ ಬುಟ್ಟಿಯೊಂದನ್ನು ಕೊಂಡುಕೊಟ್ಟರೆ ತಾನು ಗಂಡನ ಸಮಾಚಾರವನ್ನು ನೋಡಿಕೊಂಡು ಬರುವೆನೆಂಬುದಾಗಿ ಹೇಳಿ ಹಾಗೆ ಮಾಡುತ್ತಾಳೆ. ಇಲ್ಲಿಗೆ ಮತ್ತೆ ಮೂರು ನುಡಿಗಳು ಮುಗಿದವು. ಮುಂದಿನ ೮ ನುಡಿಗಳಲ್ಲಿ ಅತ್ತೆ ಕೊಟ್ಟ ಮಾಣಿಕ ಹಚ್ಚಿದ ಬುಟ್ಟಿಯನ್ನು ತೆಗೆದುಕೊಂಡು ದನಕಾಯುವ ಹುಡುಗರಿಗೆ ತನ್ನ ರಾಯರಿರುವ ರಾಜಪಟ್ಟಣದ ಹಾದಿಯನ್ನು ಕೇಳುವಳು. ಆವರು ಹೇಳಿದಂತೆ ಬೇರೆ ಬೇರೆ ಉಡುಪುಗಳನ್ನು ಉಟ್ಟುಕೊಂಡು ತನ್ನಂತಹ ಬಾಲೆಯರನ್ನೂ ಹೆರದೆಯರನ್ನೂ ಬಲಗೊಂಡು ಅಲ್ಲಿಗೆ ಹೋಗುವಳು. ಆ ಮೇಲೆ ಅವಳು ಭವಿಷ್ಯವನ್ನು ಹೇಳುವ ಕೊರವಂಜಿಯ ವೇಷದಿಂದ ಗಂಡನ ಹತ್ತರ ಹೋಗಿ – “ನಿನಗೆ ಸೂಳೆಯರ ಕೈಯಲ್ಲಿ ಮರಣವುಂಟೆಂದು ಕಣಿ (ಶಕುನ) ಹೇಳುತ್ತಾಳೆ. ಅದಕ್ಕೆ ಅವನು “ವಶೀಕರಣ ವಿದ್ಯೆಯಿಂದ ತನ್ನ ಹೆಂಡತಿಯನ್ನು ತನಗೆ ಕೂಡಿಸೆ”ಂದು ಬಿನ್ನನಿಸುತ್ತಾನೆ. ಆಗ ಅವಳು ತನ್ನ ನಿಜರೂಪನನ್ನು ಪ್ರಕಟಸುತ್ತಾಳೆ. ಇಬ್ಬರೂ ಕೂಡಿ ತಮ್ಮ ಊರಿಗೆ ಹೊರಡುತ್ತಾರೆ. ಆಗ ಅವನ ಸೂಳೆಯು ತಾನೂ ಬರುವೆನೆಂದು ಬೆನ್ನು ಹತ್ತಲು ಇವರು ಅವಳನ್ನು ಹಿಂದಕ್ಕೆ ನೂಕಿ ಮುಂದೆ ಹೊರಡುತ್ತಾರೆ. ಕೊನೆಗೆ ಮನೆಯ ಬಾಗಿಲಿಗೆ ಹೋಗಿ ಆ ಬಾಲೆಯು ತನ್ನ ಅತ್ತೆಗೆ “ಸಂಭ್ರಮವನ್ನು ನೋಡಬಾರೆ’ಂದು ಹೊರಕ್ಕೆ ಕರೆಯುತ್ತಾಳೆ. ಇಲ್ಲಿಗೆ ಹಾಡು ಮುಗಿಯುವುದು.

ಛಂದಸ್ಸು:- ತ್ರಿಪದಿಗೆ ಸಮೀಪವಾಗಿದೆ. ಆದರೆ ಅನ್ನುವ ಮಟ್ಟು ಎರಡು ವಿಧವಾಗಿದೆ.

ಶಬ್ದ ಪ್ರಯೋಗಗಳು:- ಅಬರಂಗ ಧೊರಿ=ಅಭ್ರಕದಂತೆ ನುಣುಪು ಮೈಯುಳ್ಳ ರಾಜಪುರುಷ. ಛೆಲವಿ=ಸುಂದರಿ. ಮಕದೋರು=ಮುಖ ತೋರಿಸು. ದಟ್ಟಿ=ಸೀರೆ, ದುಕೂಲ. ಸುಳಿಗಾರ=ಸಂಚಾರಿ. ನಿಂಬಿ=ಲಿಂಬಿ. ಕೊರವಂಜಿ=ಕುಂಚೀಕೊರವರ ಹೆಂಗಸು. ದ್ಯಾವರ್ಹೇಳು=ದೇವಾ ವೇಶದಿಂದ ಭವಿಷ್ಯ ಹೇಳುವಿಕೆ. ಕೈ ತಾ=ಅಂಗೈ ತೋರಿಸು. ಮಾಡಿಹೊಡಿ=ಮದ್ದುಹಾಕಿ ಕೊಲ್ಲು. ಗರದೀಲೆ=ಸಂಭ್ರಮದಿಂದ. ರಂಡಿ=ಸೂಳಿ. ಹೊಡ ಮಳ್ಳಿ=ಹಿಂತಿರಗಿ. ಹೊಳ್ಳು=ಹೊರಳು. ಚೆಪ್ಪೂಲಿ=ಹೆಣ್ಣುಮಕ್ಳು ಮೆಟ್ಟುವ ಕಾಲ್ಮರೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್‍ಮಯುದ್ಧ v/s ಗೆರಿಲ್ಲಾ ಯುದ್ಧ
Next post ಲಾಲ್ ಬಹದ್ದೂರ್ ಶಾಸ್ತ್ರಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…